LATEST NEWS
ದಿನಕ್ಕೊಂದು ಕಥೆ – ಭೋರ್ಗರೆತ
ಭೋರ್ಗರೆತ
ಧೀರಜ್ ಬೆಳ್ಳಾರೆ
ಹುಟ್ಟಿನಿಂದ ಅಮ್ಮನ ಲಾಲಿಗಿಂತ ಕಡಲ ಬೋರ್ಗರೆತವೇ ಕೇಳುತ್ತಿರುವಾಗ ಅದೇ ಹೆಚ್ಚು ಆಪ್ಯಾಯಮಾನವಾಗುತ್ತಿದೆ. ಜನರ ಊರಿಗೆ ,ಅಲೆಯ ನೀರಿಗೆ ಮಧ್ಯದಲ್ಲಿರುವ ಮರಳೇ ನಮ್ಮ ಕ್ರೀಡಾಂಗಣ. ಯಾವತ್ತೂ ಸಮುದ್ರ ನಮ್ಮನ್ನ ಭಯ ಪಡಿಸಿಲ್ಲ . ಕುತೂಹಲವನ್ನ ಹೆಚ್ಚಿಸಿದೆ.
ಸಮುದ್ರದ ಮೇಲೆ ಸಿಟ್ಟಿದೆ, ಚಿಕ್ಕಪ್ಪನನ್ನು ದೋಣಿ ಸಮೇತ ಮುಗಿಸಿದ್ದಕ್ಕೆ ,ಮನೆಯನ್ನು ಅಲೆಬಂದು ಕರೆದೊಯ್ದದ್ದಕ್ಕೆ. ಪಾಪ ಸಮುದ್ರಕ್ಕೆ ಮನೆ ಇಲ್ಲಾ ಅಂತ ಕಾಣುತ್ತೆ .ಆದರೂ ನಾವು ಬಿಟ್ಟಿಲ್ಲ ಹಿಮ್ಮೆಟ್ಟಿಸುತ್ತೇವೆ ಸಮುದ್ರವನ್ನು .ಅಲೆಗಳ ಮೇಲೆ ಏರಿ ಸವಾರಿ ಮಾಡಿ ಮೀನು ಹಿಡಿದು ತರುತ್ತೇವೆ. ಸಮುದ್ರ ಹತ್ತಿರವಾಗಿದೆ ,ಕಾಲದ ಗತಿ ಬದಲಾಗಿದೆ. ಅಲೆಗಳ ಗಾತ್ರ ಹೆಚ್ಚಾಗಿ ಕುಣಿದಿದೆ .ದೋಣಿಗೆ ಹಾಯಿ ಕಟ್ಟಿ ,ಹುಟ್ಟು ಹಿಡಿದು ಹೊರಟಿದ್ದೇವೆ ಸಮುದ್ರಕ್ಕೆ .
ಬಲೆಯ ಬೀಸಿದ್ದೇವೆ. ದಡದಲ್ಲಿ ಕಾಯುತ್ತಿರುವ ದಲ್ಲಾಳಿಗಳು ಮೀನಿನ ದೇಹಕ್ಕೆ ಮಾತ್ರ ಬೆಲೆ ನೀಡುತ್ತಾರೆ , ನಮ್ಮ ದೇಹ ಕೊಳೆತರೂ ಅದಕ್ಕೆ ಕಿಮ್ಮತ್ತಿಲ್ಲ. ಓಲಾಡಿದೆ ದೋಣಿಗಾಳಿಗೆ ಜಿಕಿದ್ದೇವೆ .ನಮ್ಮ ಬೆವರಹನಿಗೆ ಸಮುದ್ರದ ನೀರಿನ ಉಪ್ಪು ಹೆಚ್ಚಾಗಿದೆ. ಮೀನುಗಳು ಬಲೆಯೊಳಗೆ ಹೆಚ್ಚಿವೆ.
ಮರಳುತ್ತಿದೆ ದೋಣಿ .ಮೀನು ದಡ ತಲುಪಿದರೆ ಹೊಟ್ಟೆಗೆ ಊಟ. ನಮ್ಮ ಹೆಣ ತಲುಪಿದರೆ….. ನಮ್ಮವರ ನೋವಿನ ಕಣ್ಣೀರು ಹರಿದರೂ ಹೋರಾಟ ನಿಲ್ಲದು. ಮತ್ತೆ ಅಲೆಗಳ ಮೇಲೆ ಸವಾರಿ ಶುರುವಾಗುತ್ತದೆ …