ಧಾರವಾಡ,ಮಾರ್ಚ್ 31: ಜಿಮ್ವೊಂದರಲ್ಲಿ ಮುಸ್ಲಿಂ ಜಿಮ್ ಟ್ರೈನರ್ ವೊಬ್ಬ ವರ್ಕೌಟ್ ಮಾಡಲು ಬರುವ ಯುವತಿಯರಿಗೆ ಟ್ರೈನಿಂಗ್ ವೇಳೆ ಬೇಕಂತಲೇ ಮೈಮುಟ್ಟಿ ಅನುಚಿತವಾಗಿ ವರ್ತಿಸುವ ಆರೋಪವೊಂದು ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಬಜರಂಗದಳದ ಕಾರ್ಯಕರ್ತರು ಜಿಮ್ಗೆ ಬೀಗ ಜಡಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಧಾರವಾಡ ನಗರದ ಮರಾಠಾ ಕಾಲನಿಯಲ್ಲಿರುವ ‘ಫಿಟ್ನೆಸ್ ಫಸ್ಟ್’ ಜಿಮ್ನ ಟ್ರೈನರ್ ಸಾಬಿರ್ ಎಂಬಾತನ ಮೇಲೆ ಈ ಆರೋಪ ಕೇಳಿಬಂದಿದೆ. ಜಿಮ್ಗೆ ವರ್ಕೌಟ್ ಮಾಡಲು ಬರುವ ಯುವತಿಯರಿಗೆ ತರಬೇತಿ ನೀಡುವ ನೆಪದಲ್ಲಿ ಸಾಬಿರ್ ಉದ್ದೇಶಪೂರ್ವಕವಾಗಿ ಮೈಮುಟ್ಟಿ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ದೂರಲಾಗಿದೆ. ಅಷ್ಟೇ ಅಲ್ಲದೆ, ಈತ ಮಹಿಳೆಯರ ಶೌಚಾಲಯದತ್ತಲೂ ಹೋಗಿ ಬರುತ್ತಿದ್ದ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಬಜರಂಗದಳದ ಕಾರ್ಯಕರ್ತರು, ಜಿಮ್ಗೆ ಬೀಗ ಹಾಕಿ ಟ್ರೈನರ್ ವಿರುದ್ಧ ಘೋಷಣೆಗಳನ್ನು ಕೂಗಿದರು. “ಯುವತಿಯರನ್ನೇ ಗುರಿಯಾಗಿಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿರುವ ಸಾಬಿರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಹಿಂದೆಯೂ ಇದೇ ವಿಚಾರವಾಗಿ ಸಾಬಿರ್ಗೆ ಎಚ್ಚರಿಕೆ ನೀಡಲಾಗಿತ್ತು, ಆದರೂ ಆತ ತನ್ನ ವರ್ತನೆ ತಿದ್ದಿಕೊಂಡಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಉಪ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದರು. ಆದರೆ, ಆರೋಪಿ ಸಾಬಿರ್ನನ್ನು ಸ್ಥಳಕ್ಕೆ ಕರೆಸಲೇಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಸದ್ಯ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿರುವ ಪೊಲೀಸರು, ಕಾನೂನು ಕೈಗೆತ್ತಿಕೊಳ್ಳದಂತೆ ಮನವಿ ಮಾಡಿದ್ದಾರೆ. ಸಂತ್ರಸ್ತರಿಂದ ದೂರು ಸ್ವೀಕರಿಸಿದ ಬಳಿಕ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.