LATEST NEWS
ಧರ್ಮಸ್ಥಳ ಪ್ರಕರಣ – ಹಿರಿಯ ಐಪಿಎಸ್ ಅಧಿಕಾರಿ ಪ್ರಣವ ಮೊಹಾಂತಿ ನೇತೃತ್ವದಲ್ಲಿ ಎಸ್ಐಟಿ ತನಿಖೆ

ಮಂಗಳೂರು ಜುಲೈ 20: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಎನ್ನಲಾದ ನೂರಾರು ಹತ್ಯೆಗಳ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಕೊನೆಗೂ ರಾಜ್ಯ ಸರಕಾರ ಎಸ್ ಐಟಿಗೆ ವಹಿಸಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವ ರಾಜ್ಯ ಸರಕಾರ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಆರೋಪ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿದೆ. ಡಾ. ಪ್ರಣವ ಮೊಹಾಂತಿ ಅವರ ನೇತೃತ್ವದಲ್ಲಿ ನಾಲ್ಕು ಅಧಿಕಾರಿಗಳ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಐಪಿಎಸ್ ಅಧಿಕಾರಿಗಳಾದ ಎಂ.ಎನ್. ಅನುಚೇತ್, ಸೌಮ್ಯಲತಾ ಮತ್ತು ಜಿತೇಂದ್ರ ಕುಮಾರ್ ದಯಾಮ ಅವರು ಈ ತಂಡದಲ್ಲಿದ್ದಾರೆ.

ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ತಾನು ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡಿದ್ದ. ತನಗೆ ಜೀವ ಬೆದರಿಕೆ ಒಡ್ಡಿ, ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ. ನಾನೇ ಹಲವಾರು ಮೃತದೇಹಗಳನ್ನು ವಿಲೇವಾರಿ ಮಾಡಿದ್ದು, ಈಗ ಪಾಪಪ್ರಜ್ಞೆ ಕಾಡುತ್ತಿದೆ ಎಂದು ವಕೀಲರ ಮೂಲಕ ಹೇಳಿಕೊಂಡಿದ್ದ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದು ಸಂಚಲನಕ್ಕೆ ಕಾರಣವಾಗಿತ್ತು. ಎಸ್ ಐಟಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಬೇಕು ಎಂದು ಆಗ್ರಹಗಳು ಕೇಳಿಬಂದಿದ್ದವು. ಆದರೆ ಇದೀಗ ರಾಜ್ಯ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳ ವಿಶೇಷ ತನಿಖಾ ತಂಡ ರಚಿಸಿ ಆದೇಶಿಸಿದೆ.