ಬೆಳ್ತಂಗಡಿ ಸೆಪ್ಟೆಂಬರ್ 04: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಯೂಟ್ಯೂಬರ್ ಅಭಿಷೇಕ್ ನನ್ನು ನಿನ್ನೆ ರಾತ್ರಿ ಪೂರ್ತಿ ವಿಚಾರಣೆ ನಡೆಸಿದ್ದಾರೆ.


ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಸೆಪ್ಟೆಂಬರ್ .3 ರಂದು ಸಂಜೆ ವಿಚಾರಣೆಗೆ ದಾಖಲೆಗಳ ಜತೆ ಹಾಜರಾಗಿದ್ದ ಯೂಟ್ಯೂಬರ್ ಅಭಿಷೇಕ್ ನನ್ನು ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ವಿಚಾರಣೆ ನಡೆಸಿದ್ದಾರೆ. ಎಸ್.ಐ.ಟಿ ವಶದಲ್ಲಿರುವ ಅಭಿಷೇಕ್ ಗುರುವಾರ ಕೂಡ ವಿಚಾರಣೆ ಎದುರಿಸಲಿದ್ದಾನೆ. ಬುರುಡೆಗಾಗಿ ಜಯಂತ್ ಟಿ. ಜತೆ ಸೇರಿ ಅಭಿಷೇಕ್ ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ರಾತ್ರಿಯಿಡೀ ಹುಡುಕಾಟ ನಡೆಸಿದ್ದರು‌. ಮಾತ್ರವಲ್ಲದೆ ಇದರ ವಿಡಿಯೋ ಚಿತ್ರೀಕರಣವನ್ನು ನಡೆಸಿದ್ದರು. ಈ ಹಿನ್ನೆಲೆ ಈತನ ವಿರುದ್ಧ ದೂರು ದಾಖಲಿಸಲಾಗಿತ್ತು. ಹಾಗಾಗಿ ತೀವ್ರ ವಿಚಾರಣೆ ನಡೆಸಲಾಗಿದೆ.

ಇದಲ್ಲದೆ ಎಸ್ಐಟಿ ಚಿನ್ನಯನನ್ನು ವಶಕ್ಕೆ ಪಡೆದ ಬಳಿಕ ಚಿನ್ನಯ್ಯನ ಮಾಸ್ಕ್ ಹೊರತಾದ ಸಂದರ್ಶನ ಮಾಡಿದ ವಿಡಿಯೋ ಕೂಡ ಹರಿಬಿಡಲಾಗಿತ್ತು. ಇದರಲ್ಲಿ ಯ್ಯೂಟ್ಯೂಬರ್ ಅಭಿಷೇಕ್ ಕೂಡ ಷಡ್ಯಂತ್ರದ ಭಾಗವೇ ಎಂಬುದರ ವಿಚಾರವಾಗಿ ತೀವ್ರ ತನಿಖೆಗೆ ಒಳಪಡಿಸಿರುವ ಸಾಧ್ಯತೆಯಿದೆ.

Share Information