ಬೆಳ್ತಂಗಡಿ ಸೆಪ್ಟೆಂಬರ್ 15: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ವಿರುದ್ದ ಇದೀಗ ಧರ್ಮಸ್ಥಳ ಪರ ಇರುವ ಕೆಲವು ಅಸಮಧಾನ ಹೊರಹಾಕಿದ್ದಾರೆ. ಎಸ್ ಐಟಿ ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎನ್ನವುದು ಅವರ ವಾದವಾಗಿದೆ. ಈ ನಡುವೆ ಎಸ್ಐಟಿಗೆ ಇದುವರೆಗೆ 30ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಅರ್ಹ ದೂರುಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಎಸ್‌ಐಟಿ ಮುಂದಾಗಿದೆ.


ದಾಖಲಾದ ದೂರುಗಳಲ್ಲಿ ನಾಪತ್ತೆ ಪ್ರಕರಣಗಳು, ಅಸಹಜ ಸಾವುಗಳು, ಶಂಕಿತ ಕೊಲೆ ಪ್ರಕರಣಗಳು, ಮೃತದೇಹಗಳನ್ನು ಗ್ರಾಮ ಪಂಚಾಯಿತಿ ಹಾಗೂ ಹಾಗೂ ಪೊಲೀಸರ ಸಹಕಾರದಿಂದ ಅಕ್ರಮವಾಗಿ ವಿಲೇವಾರಿ ಮಾಡಿದ ಆರೋಪ ಹಾಗೂ ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ಸಂಚು ರೂಪಿಸಲಾಗಿದೆ ಹಾಗೂ ಇದಕ್ಕೆ ವಿದೇಶದಿಂದ ಹಣಕಾಸು ಪೂರೈಕೆ ಆಗಿದೆ’ ಎಂದು ಆರೋಪಿಸಿ ಕೆಲವರು ದೂರು ನೀಡಿದ್ದರು.


ಈಗಾಗಲೇ ಎಸ್ಐಟಿ ಮುಖ್ಯಸ್ಥ ಮೊಹಾಂತಿ ಅವರು ರವಿವಾರ ಬೆಳ್ತಂಗಡಿ ಎಸ್‌ಐಟಿ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಬುರುಡೆ ಪ್ರಕರಣದ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘ‌ ಸಭೆ ನಡೆಸಿದರು. ಈ ವೇಳೆ ತನಿಖಾಧಿಕಾರಿಗಳಾದ ಜಿತೇಂದ್ರ ಕುಮಾರ್‌ ದಯಾಮ, ಎಸ್ಪಿ. ಸಿ.ಎ.ಸೈಮನ್‌, ಡಿವೈಎಸ್ಪಿ ಇನ್‌ಸ್ಪೆಕ್ಟರ್‌ ದರ್ಜೆಯ ಅಧಿಕಾರಿಗಳೊಂದಿಗೆ ರಾತ್ರಿ 10 ಗಂಟೆಯವರೆಗೆ ನಿರಂತರ ಸಭೆ ನಡೆಸಿದರು. ಬುರುಡೆ ತರುವಲ್ಲಿ ಸಹಕರಿಸಿದ್ದ ಬಂಟ್ವಾಳದ ಪ್ರದೀಪ್‌ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ವಿವರ ಪಡೆದಿದ್ದಾರೆ. ಇದುವರೆಗೆ ನಡೆದಿರುವ ವಿಚಾರಣೆಯ ಕುರಿತಂತೆ ವಿವರವಾದ ಮಾಹಿತಿಯನ್ನೂ ಮೊಹಾಂತಿ ಪಡೆದಿದ್ದಾರೆ.

ಸಾಕ್ಷಿ ದೂರುದಾರ ತಂದೊಪ್ಪಿಸಿದ್ದ ಬುರುಡೆಯನ್ನು ಬಂಗ್ಲೆಗುಡ್ಡೆಯ ಕಾಡಿನಿಂದ ಹೊರ ತೆಗೆಯಲಾಗಿತ್ತು. ‘ಆ ಬುರುಡೆ ಸಿಕ್ಕ ಜಾಗದ ಮಹಜರಿಗೆ ತೆರಳಿದಾಗ ಇನ್ನಷ್ಟು ಮೃತದೇಹಗಳ ಅವಶೇಷಗಳು ಕಂಡುಬಂದಿದ್ದವು’ ಎಂಬುದಾಗಿ ಸಾಕ್ಷಿ ದೂರುದಾರನಿಗೆ ಬುರುಡೆ ಇದ್ದ ಜಾಗವನ್ನು ತೋರಿಸಿದ್ದ ವಿಠಲ ಗೌಡ ಹೇಳಿಕೆ ನೀಡಿದ್ದರು. ‘ಈ ಬಗ್ಗೆ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಆ ಜಾಗದ ಮಹಜರಿನ ವೇಳೆ ಎಸ್‌ಐಟಿ ಅಧಿಕಾರಿಗಳೂ ಅವುಗಳನ್ನು ನೋಡಿದ್ದಾರೆ. ಆ ಜಾಗದಲ್ಲಿ ಮತ್ತಷ್ಟು ಶೋಧ ನಡೆಸುವ ಸಾಧ್ಯತೆ ಇದ್ದು, ಇದಕ್ಕೆ ಸಿದ್ಧತೆ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.

Share Information