ಬೆಳ್ತಂಗಡಿ ಡಿಸೆಂಬರ್ 04: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತರಾತುರಿಯಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಿ ಸುಳ್ಳು ಸಾಕ್ಷಿಗಳನ್ನು ಸೃಷ್ಠಿಸಿದ್ದ ಆರೋಪಿಗಳ ವಿರುದ್ದ ಕ್ರಮಕ್ಕೆ ಅನುಮತಿ ನೀಡಲು ಕೋರ್ಟ್ ಮೊರೆ ಹೋಗಿದ್ದ ಎಸ್ ಐಟಿ ತಂಡಕ್ಕೆ ಹಿನ್ನಡೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಅಂತಿಮ ವರದಿ ಸಲ್ಲಿಕೆಯಾದ ಬಳಿಕವೇ ಈ ಬಗ್ಗೆ ಆದೇಶ ಮಾಡುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಧರ್ಮಸ್ಥಳ ಗ್ರಾಮದಲ್ಲಿ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳ ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಂಬಂಧ ಎಸ್‌ಐಟಿ ಮಧ್ಯಂತರ ವರಿದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಎಸ್‌ಐಟಿಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 215 ಅಡಿ 3,900 ಪುಟಗಳ ವರದಿಯನ್ನು ನ.20ರಂದು ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಸುಳ್ಳು ಪುರಾವೆಗಳನ್ನು ಸಲ್ಲಿಸಿ ಯಾವ ರೀತಿ ನ್ಯಾಯಾಲಯದ ದಾರಿ ತಪ್ಪಿಸಲಾಗಿದೆ ಎಂದು ಎಸ್‌ಐಟಿ ವಿವರಿಸಿತ್ತು.
ಆರೋಪಿ ಚಿನ್ನ ಸಿ.ಎನ್, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟೆಣ್ಣವರ, ಜಯಂತ್ ಟಿ., ವಿಠಲ ಗೌಡ, ಸುಜಾತಾ ಭಟ್ ನ್ಯಾಯಾಲಯದ ದಾರಿ ತಪ್ಪಿಸಿರುವ ಕುರಿತು ಬಿಎನ್‌ಎಸ್ಎಸ್ ಸೆಕ್ಷನ್ 379ರ ಅಡಿ ತನಿಖೆಗೆ ನಿರ್ದೇಶನ ನೀಡುವಂತೆ ಎಸ್‌ಐಟಿ ಕೋರಿತ್ತು.

ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟೆಣ್ಣವರ, ಜಯಂತ್ ಟಿ., ವಿಠಲ ಗೌಡ ಮತ್ತು ಸುಜಾತಾ ಭಟ್ ತನಿಖೆಗೆ ಸಹಕರಿಸಿಲ್ಲ’ ಎಂದು ಎಸ್‌ಐಟಿಯು ವರದಿಯಲ್ಲಿ ಉಲ್ಲೇಖಿಸಿರುವುದನ್ನು ನ್ಯಾಯಾಲಯವು ಗಮನಿಸಿದೆ. ಎಸ್‌ಐಟಿಯು ಈಗ ಸಲ್ಲಿಸಿರುವ ವರದಿ ಅನ್ವಯ ನ್ಯಾಯಾಲಯವು ಈ ಹಂತದಲ್ಲಿ ಯಾವುದೇ ಆದೇಶ ಪ್ರಕಟಿಸುವುದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವರದಿ ಸಲ್ಲಿಸಿ’ ಎಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಟಿ.ಎಚ್.ವಿಜಯೇಂದ್ರ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ದೇವಸ್ಥಾನವನ್ನು ಈ ಪ್ರಕರಣದಲ್ಲಿ ‘ಸಂತ್ರಸ್ತ’ ಎಂದು ಪರಿಗಣಿಸಿ, ವಿಚಾರಣೆ ವೇಳೆ ಕ್ಷೇತ್ರದ ಪರವಾಗಿ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಕೋರಿ ದೇವಸ್ಥಾನದ ವಕ್ತಾರ ಪಾರ್ಶ್ವನಾಥ್ ಜೈನ್ 2025ರ ಡಿ.31ರಂದು ಅರ್ಜಿ ಸಲ್ಲಿಸಿದ್ದರು. ದೇವಸ್ಥಾನದ ಕಡೆಯ ಅರ್ಜಿಗೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಸರ್ಕಾರಿ ವಕೀಲರಾದ ದಿವ್ಯರಾಜ ಹೆಗ್ಡೆ ಕೋರಿದ್ದರಿಂದ ನ್ಯಾಯಾಧೀಶರು, ಆ ಕುರಿತ ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಿದರು.



