ಬೆಂಗಳೂರು ಮಾರ್ಚ್ 19: ಧರ್ಮಸ್ಥಳದಲ್ಲಿ 1990 ರಿಂದ 2021ರ ನಡುವೆ ನಡೆದಿದೆ ಎನ್ನಲಾದ 74 ಅಸಹಜ ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖಾ ವರದಿ ಮತ್ತು ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.

ಕುಸುಮಾವತಿ ಅವರ ಅರ್ಜಿ: ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಗೀಡಾದ ವಿದ್ಯಾರ್ಥಿನಿ ಸೌಜನ್ಯಾ ಅವರ ತಾಯಿ ಕುಸುಮಾವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲ ಎಸ್. ಬಾಲನ್ ವಾದ ಮಂಡಿಸಿ, “ಅಸಹಜವಾಗಿ ಸಾವನ್ನಪ್ಪಿದ 74 ಪ್ರಕರಣಗಳಲ್ಲಿ ಸರಿಯಾದ ಪಂಚನಾಮೆ ನಡೆಸಿಲ್ಲ, ಮರಣೋತ್ತರ ಪರೀಕ್ಷೆ ಮಾಡದೆ ಶವ ಸಂಸ್ಕಾರ ಮಾಡಲಾಗಿದೆ. ಈ ಬಗ್ಗೆ ಹೊಸದಾಗಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು” ಎಂದು ಕೋರಿದರು.
ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ”ಅರ್ಜಿದಾರರು ಪ್ರಸ್ತಾಪಿಸಿರುವ ಪ್ರಕರಣಗಳು 2002ರಲ್ಲಿ ನಡೆದಿವೆ. 74 ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗಿದ್ದು, ಯುಡಿಆರ್ ದಾಖಲಿಸಲಾಗಿದೆ. ಸದ್ಯ ರಚಿಸಿರುವ ವಿಶೇಷ ತನಿಖಾ ದಳಕ್ಕೆ ಪ್ರಕರಣಗಳನ್ನು ವರ್ಗಾಯಿಸುವಂಥದ್ದು ಏನೂ ಇಲ್ಲ. ಯುಡಿಆರ್ಗಳಿಗೆ ಸಂಬಂಧಿಸಿದಂತೆ ಯಾವುದಾದರೂ ದಾಖಲೆ ಸಲ್ಲಿಸಿದರೆ ಅಥವಾ ದೂರು ದಾಖಲಿಸಿದರೆ ಅದನ್ನು ತನಿಖೆಗೆ ಒಳಪಡಿಸಲಾಗುವುದು. ಅರ್ಜಿದಾರರ ಸಹೋದರನನ್ನು ಧರ್ಮಸ್ಥಳ ಸಾಮೂಹಿಕ ದಹನ ಪ್ರಕರಣದಲ್ಲಿ ತನಿಖೆಗೆ ಒಳಪಡಿಸಲಾಗಿದೆ,” ಎಂದರು.
ಅರ್ಜಿದಾರರ ಪರ ವಕೀಲ ಎಸ್.ಬಾಲನ್, ”ಅಸಹಜವಾಗಿ ಸಾವನ್ನಪ್ಪಿದವರ ಪಟ್ಟಿಯನ್ನು ನ್ಯಾಯಾಲಯದ ಮುಂದಿಡಲಾಗಿದೆ. ಪ್ರಕ್ರಿಯೆ ಪಾಲಿಸದೇ ಶವಗಳ ಸಂಸ್ಕಾರ ಮಾಡಲಾಗಿದೆ. ಅಸಹಜವಾಗಿ ಸಾವನ್ನಪ್ಪಿದವರ 74 ಪ್ರಕರಣಗಳಲ್ಲಿ ಪಂಚನಾಮೆ ನಡೆಸಿಲ್ಲ. ಶವಗಳ ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಶವ ಸಂಸ್ಕಾರ ಮಾಡಿದ್ದಾರೆಯೇ, ಸುಟ್ಟಿದ್ದಾರೆಯೇ ಎಂಬ ಮಾಹಿತಿ ಇಲ್ಲ. ಈ ಸಂಬಂಧ ಎಲ್ಲಾದಾಖಲೆಗಳನ್ನು ಸಂಗ್ರಹಿಸಲಾಗಿದೆ. ಹಲವು ಪ್ರಕರಣಗಳಲ್ಲಿ ಮಹಿಳೆಯರು ಲಾಡ್ಜ್ನಲ್ಲಿ ಉಳಿದುಕೊಂಡು ನಾಪತ್ತೆಯಾಗಿದ್ದಾರೆ. ಆದರೆ, ಈ ಪ್ರಕರಣದಲ್ಲಿತನಿಖೆ ನಡೆಸಿಲ್ಲ. ಶವಗಳನ್ನು ಸಂಸ್ಕಾರ ಮಾಡಲಾಗಿದೆ. ಆದರೆ, ಯಾವುದೇ ಎಫ್ಐಆರ್ ದಾಖಲಿಸಿ, ತನಿಖೆ ನಡೆದಿಲ್ಲ. ಹೊಸದಾಗಿ 74 ಎಫ್ಐಆರ್ ದಾಖಲಿಸಿ, ತನಿಖೆ ನಡೆಸಬೇಕೆಂಬುದು ಅರ್ಜಿದಾರರ ಕೋರಿಕೆಯಾಗಿದೆ,” ಎಂದರು.
ಅದಕ್ಕೆ ಎಜಿ, ”ಮಹಜರು, ಮರಣೋತ್ತರ ಪರೀಕ್ಷೆ, ವೈದ್ಯರ ಹೇಳಿಕೆ ಎಲ್ಲವೂ ಇದೆ. ಇಡೀ ದಾಖಲೆಯನ್ನು ನ್ಯಾಯಾಲಯದ ಮುಂದಿಡಲಾಗುವುದು. ತನಿಖೆಯ ವಿವರ, ಏನು ಮಾಡಲಾಗಿದೆ ಎಂಬ ಕುರಿತು ವಿಸ್ತೃತವಾದ ಆಕ್ಷೇಪಣೆ ಸಲ್ಲಿಸಲಾಗುವುದು,” ಎಂದರು.