ಬೆಳ್ತಂಗಡಿ ಸೆಪ್ಟೆಂಬರ್ 08: ಧರ್ಮಸ್ಥಳ ಶವಹೂತ ಪ್ರಕರಣ ದಿನದಿಂದ ದಿನಕ್ಕೆ ತಿರುವನ್ನು ಪಡೆಯುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡ ಇದುವರೆಗೆ ಹಲವಾರು ಜನರನ್ನು ವಿಚಾರಣೆ ನಡೆಸಿ ದೂರುದಾರ ಚಿನ್ನಯ್ಯ ತಂದ ಬುರುಡೆಯ ಮಾಹಿತಿ ಕಲೆಹಾಕಿದೆ. ಇದೀಗ ತಮಿಳುನಾಡು, ಕೇರಳ , ಲ್ಯಾಬ್ ಎಂಬ ಸುದ್ದಿಯ ಬಳಿಕ ಬುರುಡೆ ಪ್ರಕರಣ ಮತ್ತೆ ಧರ್ಮಸ್ಥಳದತ್ತ ತಿರುಗಿದೆ.


ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯಲ್ಲಿ ಹೊಸ ಬೆಳವಣಿಗೆಗಳು ನಡೆಯುತ್ತಿದ್ದು, ಶನಿವಾರ ನೇತ್ರಾವತಿ ಸ್ನಾನ ಘಟ್ಟದ ಸಮೀಪ ಅರಣ್ಯದಲ್ಲಿ ಸ್ಥಳ ಮಹಜರು ನಡೆಸಿದ ವೇಳೆ ಮೃತದೇಹಗಳ ಬಗ್ಗೆ ಮತ್ತಷ್ಟು ಕುರುಹುಗಳು ಲಭ್ಯವಾಗಿರುವ ಸಂಶಯ ವ್ಯಕ್ತವಾಗಿದ್ದು, ಸೋಮವಾರ ಈ ಪರಿಸರದಲ್ಲಿ ಮತ್ತೆ ಉತ್ಖನನ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣ ಕುರಿತು ವಿಶೇಷ ತನಿಖಾ ತಂಡ (ಎಸ್ಐಟಿ) ಪಾಂಗಾಳದ ವಿಠಲ ಗೌಡ ಅವರನ್ನು ನೇತ್ರಾವತಿ ಸ್ನಾನಘಟ್ಟ ಪಕ್ಕದ ಕಾಡಿನೊಳಗೆ ಕರೆದೊಯ್ದು ಶನಿವಾರ ಮಹಜರು ನಡೆಸಿದ ವೇಳೆ ಮೃತದೇಹದ ಕೆಲ ಅವಶೇಷಗಳು ನೆಲದ ಮೇಲೆಯೇ ಪತ್ತೆಯಾಗಿವೆ ಎಂದು ಗೊತ್ತಾಗಿದೆ.


ಸಾಕ್ಷಿ ದೂರುದಾರ ಎಸ್‌ಐಟಿಗೆ ಒಪ್ಪಿಸಿದ್ದ ತಲೆ ಬುರುಡೆ ಹೊರತೆಗೆದ ಜಾಗದ ಮಹಜರಿನ ಸಲುವಾಗಿ ವಿಠಲ ಗೌಡ ಅವರನ್ನು ಬಂಗ್ಲಗುಡ್ಡೆಯ ಕಾಡಿನೊಳಗೆ ಶನಿವಾರ ಕರೆದೊಯ್ದ ಅಧಿಕಾರಿಗಳ ತಂಡ, ಮರಳುವಾಗ ಕತ್ತಲಾವರಿಸಿತ್ತು. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಇದ್ದರು. ತಂಡದ ಅಧಿಕಾರಿಗಳು ಮೃತದೇಹದ ಅವಶೇಷಗಳನ್ನು ಬಕೆಟ್‌ನಲ್ಲಿ ತುಂಬಿ ಒಯ್ದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇಲ್ಲಿ ವಿಠಲ ಗೌಡ ತೋರಿಸಿದ ಜಾಗದಲ್ಲಿ ಯಾವುದೋ ಅವಶೇಷಗಳು ಲಭಿಸಿದೆಯೋ ಅಥವಾ ಮಣ್ಣಿನ ಮಾದರಿಯನ್ನು ತಂದಿದ್ದಾರೆಯೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಎಸ್‌ಐಟಿ ತಂಡ ಸ್ಥಳ ಪರಿಶೀಲನೆಗೆ ಬಂದಿದ್ದ ವೇಳೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತಂಡದೊಂದಿಗೆ ಇದ್ದು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಮಹಜರು ನಡೆದ ವೇಳೆ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್‌ ಅವರಾಗಲಿ, ಬೆಳ್ತಂಗಡಿಯ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರಾಗಲೀ ಇರಲಿಲ್ಲ. ಮಹಜರಿನ ವೇಳೆ ನೆಲ ವನ್ನೂ ಅಗೆದಿರಲಿಲ್ಲ. ಹಾಗಾಗಿ ಅಲ್ಲಿ ಎಸ್‌ಐಟಿ ಮತ್ತೆ ಶೋಧಕಾರ್ಯ ಮುಂದುವರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತ ಪ್ರಕರಣದ ದೂರುದಾರ, ಪ್ರಸ್ತುತ ಆರೋಪಿಯಾಗಿರುವ ಮಾಸ್ಕ್‌ಮ್ಯಾನ್‌ ಚಿನ್ನಯ್ಯನ ಎಸ್‌ಐಟಿ ತನಿಖೆ ಮುಗಿದಿದ್ದು, ಶಿವಮೊಗ್ಗ ಜೈಲು ಪಾಲಾಗಿದ್ದಾನೆ. ಆತ ತಂದಿದ್ದ ತಲೆಬುರುಡೆ ರಹಸ್ಯ ಭೇದಿಸಲು ಇದೀಗ ಎಸ್‌ಐಟಿ ತಂಡ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶವನ್ನು ಕೇಂದ್ರೀಕರಿಸಿ ತನಿಖೆ ನಡೆಸುತ್ತಿದೆ.

ಚಿನ್ನಯ್ಯ ನ್ಯಾಯಾಲಯದಲ್ಲಿ ಪ್ರದರ್ಶಿಸಿರುವ ತಲೆಬುರುಡೆ ತಂದಿರುವುದು ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಿಂದ ಎಂಬುದು ತನಿಖೆಯಿಂದ ಸಾಬೀತಾಗಿದೆ. ಈ ಬಗ್ಗೆ ಇನ್ನಷ್ಟು ತನಿಖೆ ಮುಂದುವರಿದಿದೆ.
ಸಾಕ್ಷಿ ದೂರುದಾರ, ಶವಗಳನ್ನು ಹೂತಿರುವುದಾಗಿ ತೋರಿಸಿದ್ದ ಎಲ್ಲ ಜಾಗಗಳಲ್ಲಿ ಶೋಧ ಪೂರ್ಣಗೊಂಡ ಬಳಿಕ ನೇತ್ರಾವತಿ ಸ್ನಾನ ಘಟ್ಟದ ಆಸುಪಾಸಿನ ಪ್ರದೇಶದಲ್ಲಿ ಪೊಲೀಸ್ ಕಾವಲು ಹಿಂಪಡೆಯಲಾಗಿತ್ತು.
ಶನಿವಾರ ರಾತ್ರಿಯಿಂದ ನೇತ್ರಾವತಿ ಸೇತುವೆ, ಸ್ನಾನಘಟ್ಟ ಹಾಗೂ ಪಕ್ಕದ ಕಾಡಿನ ಪರಿಸರದಲ್ಲಿ ಕಾವಲಿಗೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ರಾತ್ರಿ ವೇಳೆಯೂ ಈ ಪರಿಸರದಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದಾರೆ.

ಮಾಧ್ಯಮಗಳಲ್ಲಿ ಬುರುಡೆ ಪ್ರಕರಣ ಎಂದು ತಿಂಗಳುಗಟ್ಟಲೆ ಮಾಡಿದ್ದ ಸುದ್ದಿ, ಇದೀಗ ಸುಳ್ಳಾಗುತ್ತ ಬರುತ್ತಿದೆ. ತಮಿಳುನಾಡು, ಕೇರಳ ಲ್ಯಾಬ್ ನಿಂದ ತಂದ ಬರುಡೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು, ಆದರೆ ಎಲ್ಲೂ ಮಾಹಿತಿ ಬಿಟ್ಟುಕೊಡದೆ ಪಕ್ಕಾ ತನಿಖೆ ನಡೆಸುತ್ತಿರುವ ಎಸ್ಐಟಿ ಬುರುಡೆಯ ಅಸಲಿಯತ್ತನ್ನ ಕಂಡು ಹಿಡಿಯಲು ಹೊರಟಿದ್ದಾರೆ. ಇದರೊಂದಿಗೆ ಧರ್ಮಸ್ಥಳ ಪ್ರಕರಣ ಮತ್ತಷ್ಟು ಕುತೂಹಲದತ್ತ ತಿರುಗಿದೆ

Share Information