ಹಾವೇರಿ, ಫೆಬ್ರವರಿ 28: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿವೆ. ಇತ್ತ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬರಿಗೆ ಹಾಲ್ ಟಿಕೆಟ್ ನೀಡದೆ ಸತಾಯಿಸಿದ ಅಮಾನವೀಯ ಘಟನೆ ರಾಣೆಬೆನ್ನೂರಿನ ಬಿಎಜೆಎಸ್‌ಎಸ್ (BAJSS) ಕಾಲೇಜಿನಲ್ಲಿ ನಡೆದಿದೆ.
ಸಾರಾ ಜೆಸ್ಸಿಕಾ ಎಂಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ರಾಣೆಬೆನ್ನೂರಿನ ಬಿಎಜೆಎಸ್‌ಎಸ್ ಕಾಲೇಜಿಗೆ ಬಂದಿದ್ದಳು. ಈ ವೇಳೆ ಶಿಕ್ಷಕಿ ಸುನೀತಾ ಬಿ ಶುಲ್ಕ ಕಟ್ಟಿಲ್ಲ ಅಂತ ಪರೀಕ್ಷೆಗೆ ಬಿಡದೇ ಸತಾಯಿಸಿದ್ದಾರೆ.
30 ಸಾವಿರ ರೂ. ಶುಲ್ಕ ಕಟ್ಟಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಹಾಲ್ ಟಿಕೆಟ್ ನೀಡಿಲ್ಲ. ಆದರೂ ವಿದ್ಯಾರ್ಥಿನಿ ಇಂದು (ಫೆ.28) ಕನ್ನಡ ಪರೀಕ್ಷೆ ಬರೆಯಲು ಬಂದಿದ್ದಳು. ಈ ವೇಳೆ ಶಿಕ್ಷಕಿ ಸುನೀತಾ ವಿದ್ಯಾರ್ಥಿನಿ ಸಾರಾಳನ್ನು ತಡೆದು, ಎಲ್ಲಾ ಕಾಲೇಜಿನವರೂ ಪುಗಸೆಟ್ಟೆ ಕಲಿಸ್ತಾರಾ? ಎಂದಿದ್ದಾರೆ.
ಈ ವೇಳೆ ವಿದ್ಯಾರ್ಥಿನಿ ಸಾರಾಗೆ ಹಾಲ್ ಟಿಕೆಟ್ ನೀಡುವಂತೆ ಸಾಮಾಜಿಕ ಹೋರಾಟಗಾರ ಹನುಮಂತಪ್ಪ ಆಗ್ರಹಿಸಿದ್ದು, ವಿದ್ಯಾರ್ಥಿನಿ ಭವಿಷ್ಯ ಹಾಳು ಮಾಡ್ತಿದ್ದೀರಿ ಎಂದು ಕಿಡಿಕಾರಿದ್ದಾರೆ. ಇದಕ್ಕೆ ಕಾಲೇಜು ಆಡಳಿತ ಮಂಡಳಿ ಪೀಸ್ ಕಟ್ಟೋವರೆಗೂ ಬೈಕ್ ಅಡಮಾನ ಇಟ್ಟುಕೊಂಡು ನಂತರ ಹಾಲ್ ಟಿಕೆಟ್ ನೀಡಿದೆ.
ವರದಿ ಬೆನ್ನಲ್ಲೇ ಈ ಕುರಿತು ಕಾರಣ ಕೇಳಿ ನೋಟಿಸ್ ಕೊಡೋದಾಗಿ ರಾಣೇಬೆನ್ನೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ್ ಅಡಿಗಾ ಅವರು ತಿಳಿಸಿದ್ದಾರೆ.



