ನವದೆಹಲಿ, ಮಾರ್ಚ್ 30: ಭಾರತದ ಮೇಲೆ ಭೀಕರ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ಲಷ್ಕರ್-ಎ-ತೈಬಾ (LeT) ಸಂಘಟನೆಯ ಕುಖ್ಯಾತ ಕಮಾಂಡರ್ ಶಬ್ಬೀರ್ ಅಹ್ಮದ್ ಲೋನ್ನನ್ನು ದೆಹಲಿ ಪೊಲೀಸರ ವಿಶೇಷ ಘಟಕವು ಬಾಂಗ್ಲಾದೇಶದ ಗಡಿಯಲ್ಲಿ ಬಂಧಿಸಿದೆ. ಢಾಕಾದಲ್ಲಿ ಅಡಗುತಾಣ ನಿರ್ಮಿಸಿಕೊಂಡಿದ್ದ ಈತ, ಅಲ್ಲಿಂದಲೇ ದೇಶದ ವಿವಿಧ ನಗರಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸ್ಕೆಚ್ ಹಾಕಿದ್ದ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಕಂಗನ್ ನಿವಾಸಿಯಾದ ಶಬ್ಬೀರ್ ಅಹ್ಮದ್ ಲೋನ್ (ಅಲಿಯಾಸ್ ರಾಜಾ ಕಾಶ್ಮೀರಿ), ದೀರ್ಘಕಾಲದಿಂದ ಲಷ್ಕರ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. 2007ರಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಈತ ಬಂಧಿತನಾಗಿದ್ದ. 2019ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಈತ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದ. ಅಲ್ಲಿ ಮತ್ತೊಂದು ಉಗ್ರ ಘಟಕವನ್ನು ಸ್ಥಾಪಿಸಿ, ಭಾರತದ ವಿರುದ್ಧ ಸಂಚು ರೂಪಿಸುವುದನ್ನು ಮುಂದುವರಿಸಿದ್ದ ಎನ್ನಲಾಗಿದೆ.
ದೆಹಲಿ ಪೊಲೀಸರ ವಿಶೇಷ ಘಟಕವು ಕಳೆದ ಎರಡು ತಿಂಗಳಿಂದ ಈತನ ಚಲನವಲನದ ಮೇಲೆ ತೀವ್ರ ನಿಗಾ ಇಟ್ಟಿತ್ತು. ಈತ ದೆಹಲಿ, ಕೋಲ್ಕತ್ತಾ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಉಗ್ರ ಚಟುವಟಿಕೆಗಳಿಗಾಗಿ ಯುವಕರನ್ನು ನೇಮಕ ಮಾಡುವ ಜಾಲವನ್ನು ನಡೆಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಅಂತಿಮವಾಗಿ ಬಾಂಗ್ಲಾ ಗಡಿಯಲ್ಲಿ ಈತನನ್ನು ಸುತ್ತುವರಿದ ಪೊಲೀಸರು, ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.
ಇದೇ ವೇಳೆ, ಶಬ್ಬೀರ್ ಲೋನ್ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮತ್ತೊಬ್ಬ ಪ್ರಮುಖ ಉಗ್ರ ಶೇಖ್ ಸಜ್ಜದ್ ಗುಲ್ ಪತ್ತೆಗಾಗಿ ತನಿಖಾ ಸಂಸ್ಥೆಗಳು ಶೋಧ ತೀವ್ರಗೊಳಿಸಿವೆ. ಈತ ಸದ್ಯ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಎಂಬ ಸಂಘಟನೆಯನ್ನು ಮುನ್ನಡೆಸುತ್ತಿದ್ದು, ಪಾಕಿಸ್ತಾನದಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎಂದು ಶಂಕಿಸಲಾಗಿದೆ. ಈ ಇಬ್ಬರೂ ಸೇರಿ ಭಾರತದ ಗಡಿ ಭಾಗಗಳಲ್ಲಿ ಅಸ್ಥಿರತೆ ಉಂಟುಮಾಡಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.