ತುಮಕೂರು,ಏಪ್ರಿಲ್ 02: ಹೆಸರಾಂತ ಆಯುರ್ವೇದ ಸಂಸ್ಥೆಗಳ ಟ್ರೇಡ್ಮಾರ್ಕ್ ಹಾಗೂ ಲೋಗೋಗಳನ್ನು ಕಾನೂನುಬಾಹಿರವಾಗಿ ಬಳಸಿ, ಗೋಧಿ ಹಿಟ್ಟಿನಂತಹ ಪದಾರ್ಥಗಳನ್ನು ತೂಕ ಇಳಿಸುವ ಔಷಧ ಎಂದು ಬಿಂಬಿಸಿ ಮಾರಾಟ ಮಾಡುತ್ತಿದ್ದ ಬೃಹತ್ ಅಂತರರಾಜ್ಯ ದಂಧೆಯನ್ನು ತುಮಕೂರು ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿರುವ ಬೃಹತ್ ಗೋದಾಮಿನ ಮೇಲೆ ದಾಳಿ ನಡೆಸಿದ ವಿಶೇಷ ಪೊಲೀಸ್ ತಂಡವು, ದಂಧೆಯ ಮಾಸ್ಟರ್ಮೈಂಡ್ ರಾಜೀವ್ ಖನ್ನಾ (56) ಎಂಬಾತನನ್ನು ಬಂಧಿಸಿ, ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ.

ಈ ಅಕ್ರಮ ಜಾಲದ ಕುರಿತು ಕಳೆದ 2025ರ ಆಗಸ್ಟ್ 14ರಂದು ಪ್ರಸಿದ್ಧ ‘ಜೀನಿ ಸ್ಲಿಮ್ ಪೌಡರ್’ ಸಂಸ್ಥೆಯ ಮಾಲೀಕರು ತುಮಕೂರು ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ಅಧಿಕೃತ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಚಲಾವಣೆಯಾಗುತ್ತಿದ್ದು, ಇದರಿಂದ ಸಂಸ್ಥೆಗೆ ಆರ್ಥಿಕ ನಷ್ಟವಾಗುವುದಲ್ಲದೆ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು. ಈ ದೂರಿನ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್ ಅವರು ತಂಡವೊಂದನ್ನು ರಚಿಸಿ ತನಿಖೆಗೆ ಆದೇಶಿಸಿದ್ದರು. ಸತತ ತಾಂತ್ರಿಕ ತನಿಖೆ ನಡೆಸಿದ ತಂಡಕ್ಕೆ ಈ ವಂಚನೆಯ ಜಾಲ ದೆಹಲಿಯಿಂದ ನಿಯಂತ್ರಿಸಲ್ಪಡುತ್ತಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು.
ಇದರ ಬೆನ್ನಲ್ಲೇ ಕಳೆದ ಮಾರ್ಚ್ 27ರಂದು ದೆಹಲಿಯ ಶಾಲಿಮಾರ್ ಬಾಗ್ನಲ್ಲಿರುವ ಆರೋಪಿಗಳ ಅಡಗುದಾಣದ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಆಘಾತಕಾರಿ ಸತ್ಯಗಳು ಬಯಲಾಗಿವೆ. ಆರೋಪಿಗಳು ‘RK ಟ್ರೇಡರ್ಸ್ ’ ಸೇರಿದಂತೆ ವಿವಿಧ ನಕಲಿ ಕಂಪನಿಗಳ ಹೆಸರಿನಲ್ಲಿ ಯಾವುದೇ ಪರವಾನಗಿ ಇಲ್ಲದೆ ಕಾರ್ಖಾನೆ ನಡೆಸುತ್ತಿದ್ದರು. ಅಲ್ಲಿ ಕೇವಲ ಗೋಧಿ ಹಿಟ್ಟನ್ನು ಆಕರ್ಷಕ ಡಬ್ಬಿಗಳಲ್ಲಿ ಪ್ಯಾಕ್ ಮಾಡಿ, ಅದಕ್ಕೆ ಹೆಸರಾಂತ ಆಯುರ್ವೇದ ಬ್ರ್ಯಾಂಡ್ಗಳ ನಕಲಿ ಲೇಬಲ್ ಅಂಟಿಸಲಾಗುತ್ತಿತ್ತು. ಇವುಗಳನ್ನು ಆನ್ಲೈನ್ ಮಾರುಕಟ್ಟೆಯ ಮೂಲಕ ದೇಶಾದ್ಯಂತ ಗ್ರಾಹಕರಿಗೆ, ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವ ಯುವಕರಿಗೆ ಮಾರಾಟ ಮಾಡಲಾಗುತ್ತಿತ್ತು.
ದಾಳಿಯ ವೇಳೆ ಪೊಲೀಸರು ಟ್ರಕ್ ಗಟ್ಟಲೆ ನಕಲಿ ಆಯುರ್ವೇದ ಮಾತ್ರೆಗಳು, ಸೌಂದರ್ಯವರ್ಧಕ ಕ್ರೀಮ್ಗಳು, ನಕಲಿ ಪೌಡರ್ ಮತ್ತು ಪ್ಯಾಕಿಂಗ್ಗೆ ಬಳಸುತ್ತಿದ್ದ ಸಾವಿರಾರು ಖಾಲಿ ಡಬ್ಬಿಗಳನ್ನು ಜಪ್ತಿ ಮಾಡಿದ್ದಾರೆ. ಈ ದಂಧೆಯಲ್ಲಿ ಬಂಧಿತ ರಾಜೀವ್ ಖನ್ನಾನ ಪುತ್ರರಾದ ಹಿಮಾಂಶು ಮತ್ತು ಮನನ್ ಕೂಡ ಸಕ್ರಿಯವಾಗಿ ಪಾಲ್ಗೊಂಡಿದ್ದು, ಕಳೆದ ಒಂದೂವರೆ ವರ್ಷದಿಂದ ಈ ಅಕ್ರಮ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಸ್ತುತ ತಲೆಮರೆಸಿಕೊಂಡಿರುವ ಈ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಮಾರ್ಚ್ 28ರಂದು ದೆಹಲಿಯಲ್ಲಿ ಬಂಧಿತನಾದ ಪ್ರಮುಖ ಆರೋಪಿ ರಾಜೀವ್ ಖನ್ನಾನನ್ನು ಟ್ರಾನ್ಸಿಟ್ ವಾರಂಟ್ ಅಡಿಯಲ್ಲಿ ಕರ್ನಾಟಕಕ್ಕೆ ಕರೆತರಲಾಗಿದ್ದು, ಏಪ್ರಿಲ್ 01ರಂದು ಶಿರಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಈ ಅಂತರರಾಜ್ಯ ದಂಧೆಯ ಹಿಂದೆ ಇನ್ನು ಯಾರೆಲ್ಲಾ ಭಾಗಿಯಾಗಿದ್ದಾರೆ ಮತ್ತು ಆನ್ಲೈನ್ ವೇದಿಕೆಗಳ ಮೂಲಕ ಈ ನಕಲಿ ಉತ್ಪನ್ನಗಳು ಹೇಗೆ ವಿತರಣೆಯಾಗುತ್ತಿದ್ದವು ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.