ಟೆಹ್ರಾನ್, ಮಾರ್ಚ್ 31: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ಕಾರ್ಮೋಡಗಳ ನಡುವೆ, ಭಾರತದಿಂದ ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ಕೊಂಡೊಯ್ಯಲು ಸಜ್ಜಾಗಿದ್ದ ಇರಾನ್ನ ನಾಗರಿಕ ವಿಮಾನವೊಂದರ ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ ನಡೆಸಿದೆ. ಇರಾನ್ನ ಪ್ರಮುಖ ಮಶ್ಹಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಈ ದಾಳಿಯಿಂದಾಗಿ, ಅಲ್ಲಿನ ಖಾಸಗಿ ವಿಮಾನಯಾನ ಸಂಸ್ಥೆಯಾದ ‘ಮಹಾನ್ ಏರ್’ (Mahan Air) ಗೆ ಸೇರಿದ ವಿಮಾನವು ತೀವ್ರವಾಗಿ ಜಖಂಗೊಂಡಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಈ ವಿಮಾನವು ಏಪ್ರಿಲ್ 1ರಂದು ನವದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಬೇಕಿತ್ತು. ಇರಾನ್ನಲ್ಲಿ ಸೃಷ್ಟಿಯಾಗಿರುವ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತವು ಮಾನವೀಯ ನೆಲೆಯಲ್ಲಿ ನೀಡುತ್ತಿರುವ ಸುಮಾರು 11 ಟನ್ ತೂಕದ ಜೀವ ರಕ್ಷಕ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸಂಗ್ರಹಿಸಿ ಮರಳಿ ಇರಾನ್ಗೆ ಕೊಂಡೊಯ್ಯುವುದು ಈ ವಿಮಾನದ ಮುಖ್ಯ ಉದ್ದೇಶವಾಗಿತ್ತು. ಆದರೆ ಸೋಮವಾರ (ಮಾರ್ಚ್ 30, 2026) ಮಶ್ಹಾದ್ ರನ್ವೇನಲ್ಲಿ ನಡೆದ ಈ ಅನಿರೀಕ್ಷಿತ ಕ್ಷಿಪಣಿ ದಾಳಿಯು ಇಡೀ ಕಾರ್ಯಾಚರಣೆಯನ್ನು ಅಸ್ತವ್ಯಸ್ತಗೊಳಿಸಿದೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಇರಾನ್ನ ನಾಗರಿಕ ವಿಮಾನಯಾನ ಸಂಸ್ಥೆಯು, “ನಾಗರಿಕ ವಿಮಾನದ ಮೇಲೆ ದಾಳಿ ನಡೆಸಿರುವುದು ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ICAO) ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಔಷಧ ಪೂರೈಕೆಯಂತಹ ಮಾನವೀಯ ಸೇವೆಗೆ ಅಡ್ಡಿಪಡಿಸುವುದು ಅಮಾನವೀಯ ಮತ್ತು ಇದೊಂದು ಯುದ್ಧಾಪರಾಧ” ಎಂದು ಆಕ್ರೋಶ ವ್ಯಕ್ತಪಡಿಸಿದೆ. ಭಾರತವು ಈಗಾಗಲೇ ಮಾರ್ಚ್ 18 ರಂದು ಮೊದಲ ಹಂತದ ನೆರವನ್ನು ರವಾನಿಸಿದ್ದು, ಈ ದಾಳಿಯಿಂದಾಗಿ ಎರಡನೇ ಹಂತದ ಪೂರೈಕೆಗೆ ತಾತ್ಕಾಲಿಕ ಹಿನ್ನಡೆಯಾದಂತಾಗಿದೆ.