ನವದೆಹಲಿ ಡಿಸೆಂಬರ್ 16: ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಮಂಗಳವಾರ ಮುಂಜಾನೆ ಏಳು ಬಸ್‌ಗಳು ಮತ್ತು ಮೂರು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ ನಾಲ್ವರು ಸಾವನ್ನಪ್ಪಿ, 25 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ನಂತರ ಬಸ್ಸುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಮಥುರಾ ಜಿಲ್ಲೆಯ ಬಾಲ್ಡಿಯೊ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲ್‌ಸ್ಟೋನ್ 127 ಬಳಿಯ ಯಮುನಾ ಎಕ್ಸ್‌ಪ್ರೆಸ್‌ವೇಯ ಆಗ್ರಾ-ನೋಯ್ಡಾ ವಿಭಾಗದಲ್ಲಿ ಬೆಳಿಗ್ಗೆ 4.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಭಾರೀ ಮಂಜು ಮತ್ತು ಕಡಿಮೆ ಗೋಚರತೆಯಿಂದಾಗಿ ಹಲವಾರು ವಾಹನಗಳು ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಮತ್ತು ಸ್ಥಳೀಯ ಆಡಳಿತದ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ರಕ್ಷಣಾ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ. ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವುದು ಖಚಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಸೋಮವಾರ ಬೆಳಗಿನ ಜಾವ ಕೂಡ ದಟ್ಟವಾದ ಮಂಜಿನಿಂದಾಗಿ ಸುಮಾರು 20 ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿತ್ತು. ಇದಕ್ಕೂ ಒಂದು ದಿನದ ಹಿಂದೆ ಇದೇ ರೀತಿಯ ಸರಣಿ ಅಪಘಾತಗಳಾಗಿದ್ದವು.



