ಮಲ್ಪೆ ಮೀನುಗಾರರು ನಾಪತ್ತೆಯಾಗಿ 100 ದಿನ – ರಕ್ಷಣಾ ಸಚಿವೆ ನೋಡಿ ಕಣ್ಣೀರು ಹಾಕಿದ ಕುಟುಂಬಸ್ಥರು

ಉಡುಪಿ ಮಾರ್ಚ್ 26: ಕಳೆದ ಡಿಸೆಂಬರ್ ತಿಂಗಳಲ್ಲಿ ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಮೀನುಗಾರರ ಮನೆಗಳಿಗೆ ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ, ಕುಟುಂಬಕ್ಕೆ ಸಮಾಧಾನ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದು ಉಡುಪಿಗೆ ಬೇಟಿ ನೀಡಿದ್ದ ಅವರು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಜೊತೆ ಮಲ್ಪೆಯಲ್ಲಿರುವ ಮೀನುಗಾರರ ಮನೆಗೆ ಭೇಟಿ ಕೊಟ್ಟರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನೋಡಿದ ಕೂಡಲೇ ನಾಪತ್ತೆಯಾದ ಮೀನುಗಾರರ ಬಂಧುಗಳ ಕಣ್ಣೀರ ಕಟ್ಟೆ ಒಡೆಯಿತು.

ಮೂರು ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ ಮೀನುಗಾರರ ಹುಡುಕಾಟ ಇನ್ನೂ ನಡೆಯುತ್ತಲೇ ಇದೆ. ಕುಟುಂಬಸ್ಥರು ಇವತ್ತು ಬರ್ತಾರೆ ನಾಳೆ ಬರ್ತಾರೆ ಎಂದು ಕಾಯುತ್ತಲೇ ಇದ್ದಾರೆ. ಕಾಣೆಯಾದ ಚಂದ್ರಶೇಖರ, ದಾಮೋದರ ಅವರ ಮನೆಗಳಿಗೆ ಭೇಟಿ ನೀಡಿದಾಗ ಅವರಿಬ್ಬರ ಪತ್ನಿಯರ ಆಕ್ರಂದನ ನೋಡಿ ರಕ್ಷಣಾ ಸಚಿವೆ ಅಸಹಾಯಕರಾದರು.

ಕೊನೆಗೆ ದುಃಖಿತರನ್ನು ಸಮಾಧಾನಪಡಿಸಿ, ನಾಪತ್ತೆಯಾದ ಮೀನುಗಾರರನ್ನು ಆದಷ್ಟು ಬೇಗ ಹುಡುಕಿ ಕೊಡುತ್ತೇವೆ. ಘಟನೆ ನಡೆದ ದಿನದಿಂದ ಮೀನುಗಾರರನ್ನು ಹುಡುಕಲು ಕಾರ್ಯಪ್ರವೃತರಾಗಿದ್ದೇವೆ ಎಂದು ದುಃಖತಪ್ತ ಕುಟುಂಬಕ್ಕೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.

3 Shares

Facebook Comments

comments