ಚಿಕ್ಕಮಗಳೂರು, ಮಾರ್ಚ್ 13: ಎಂಟು ವರ್ಷಗಳ ಹಿಂದೆ ಮಲಗಿದ್ದ ದಂಪತಿಯನ್ನು ಅವರ ಮಗನ ಎದುರಲ್ಲೇ ಕೊಚ್ಚಿ ಕೊಲೆಗೈದಿದ್ದ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ವ್ಯಕ್ತಿಗೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಎನ್.ಆರ್.ಪುರ ತಾಲೂಕಿನ ಕುಸುಬೂರು ಗ್ರಾಮದ ಗೋವಿಂದಪ್ಪ ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ. 2019ರಲ್ಲಿ ನಡೆದ ಈ ಭೀಕರ ಘಟನೆ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿತ್ತು. ಆರೋಪಿ ಗೋವಿಂದಪ್ಪ ದಂಪತಿಗಳ ಮೇಲೆ ದಾಳಿ ನಡೆಸಿ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿತ್ತು. ದಂಪತಿಗಳು ಮಲಗಿದ್ದ ವೇಳೆ ಮನೆಗೆ ನುಗ್ಗಿದ ಆತ, ಅವರ ಎಂಟು ವರ್ಷದ ಮಗನ ಎದುರಲ್ಲೇ ಕ್ರೂರವಾಗಿ ಹತ್ಯೆ ನಡೆಸಿದ್ದನು.
ಕೊಲೆಗೈದ ಬಳಿಕ ಬಳಸಿದ ಮಚ್ಚನ್ನು ತೆಂಗಿನ ಮರದ ಸುಳಿಯಲ್ಲಿ ಮರೆಮಾಚಿದ್ದನು ಎಂಬುದೂ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಮನೆಗೆ ಅನಧಿಕೃತವಾಗಿ ನುಗ್ಗಿದ ಆರೋಪಕ್ಕೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, ದಂಪತಿಯನ್ನು ಕೊಲೆಗೈದ ಪ್ರಕರಣಕ್ಕೆ ಗಲ್ಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪಿ. ವೀಣಾ ವಾದ ಮಂಡಿಸಿದ್ದರು.