Connect with us

MANGALORE

ವೈದ್ಯರ ನಿರ್ಲಕ್ಷಕ್ಕೆ ಬಲಿಯಾದರೇ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ?

ವೈದ್ಯರ ನಿರ್ಲಕ್ಷಕ್ಕೆ ಬಲಿಯಾದರೇ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ?

ಮಂಗಳೂರು ಡಿಸೆಂಬರ್ 30: ಉಡುಪಿ ಮೂಲದ ಖಡಕ್ ಪೋಲಿಸ್ ಅಧಿಕಾರಿ ಮಧುಕರ್‌ ಶೆಟ್ಟಿ‌‌ ಸಾವಿನ ಹಿಂದೆ ಹಲವು‌ ಸಂಶಯಗಳು ಮೂಡಲಾರಂಭಿಸಿದೆ. H1N1 ಸೋಂಕಿಗೆ ತುತ್ತಾಗಿ‌ ಮಧುಕರ್ ಶೆಟ್ಟಿ ಸಾವನ್ನಪ್ಪಿದ್ದಾರೆ ಎನ್ನುವ ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯ‌‌ ವೈದ್ಯರ ಹೇಳಿಕೆಯೇ ಸುಳ್ಳು ಎನ್ನುವ ಆಘಾತಕಾರಿ ಮಾಹಿತಿಯೊಂದು ದೊರೆತಿದೆ. ಮಧುಕರ್ ಶೆಟ್ಟಿಗೆ H1N1 ಸೋಂಕಿಗೆ ತುತ್ತಾಗಲೇ‌ ಇಲ್ಲ ಎನ್ನುವ ಮಾಹಿತಿ‌ ಬೆಳಕಿಗೆ ಬಂದಿದೆ.

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಲ್ಪ ಪ್ರಮಾಣದ ಹೃದಯಾಘಾತದ ಕಾರಣ ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಈ ಬಗ್ಗೆ ಮಧುಕರ್ ಶೆಟ್ಟಿಯವರಲ್ಲಿ ಮಾಹಿತಿ ಪಡೆಯುವ ಸಂದರ್ಭದಲ್ಲಿ ಮಧುಕರ್ ಶೆಟ್ಟಿ ಹೃದಯಾಘಾತ ಸಂಭವಿಸುವ ಮೊದಲು ತನಗೆ ಬಂದ ಜ್ವರದ ವಿಚಾರವನ್ನು ವೈದ್ಯರಿಗೆ ನೀಡಿದರು.

ಹೃದಯದ ಸಂಬಂಧಿ ವಿಚಾರವನ್ನು ಸೈಡ್ ಲೈನ್ ಮಾಡಿದ ವೈದ್ಯರು ಮಧುಕರ್ ಶೆಟ್ಟಿಯವರಿಗೆ H1N1 ಸೋಂಕು ತಗಲಿದೆ ಎನ್ನುವುದನ್ನೇ ದೃಢಪಡಿಸಿ ಚಿಕಿತ್ಸೆಯನ್ನು ನೋಡಲು ಪ್ರಾರಂಭಿಸಿದ್ದರು.

ಈ ನಡುವೆ ಮಧುಕರ್ ಶೆಟ್ಟಿಯವರಿಗೆ ಆಸ್ಪತ್ರೆಯಲ್ಲೂ ತೀವೃತರದ ಮತ್ತೊಮ್ಮೆ ಹೃದಯಾಘಾತವಾಗಿತ್ತು. ಆ ಸಮಯದಲ್ಲೂ ವೈದ್ಯರು ಈ ವಿಚಾರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಲ್ಲದೆ, H1N1 ಎನ್ನುವ ಭೂತದ ಹಿಂದೆಯೇ ಬಿದ್ದ ಕಾರಣ ಮಧುಕರ್ ಶೆಟ್ಟಿ ಸಾವನ್ನಪ್ಪಲು ಪ್ರಮುಖ ಕಾರಣವಾಗಿತ್ತು ಎನ್ನಲಾಗಿದೆ. ಅಲ್ಲದೆ ಚಿಕಿತ್ಸೆಯ ದುಷ್ಪರಿಣಾಮ ಕೂಡಾ ಮಧುಕರ್ ಶೆಟ್ಟಿಯವರ ದೇಹದ ಮೇಲಾಗಿತ್ತು.

ಹೃದಯಾಘಾತಕ್ಕೆ ನೀಡಬೇಕಾದ ಚಿಕಿತ್ಸೆಗೆ ಬದಲಾಗಿ ಮಧುಕರ್ ಶೆಟ್ಟಿಯವರಿಗೆ H1N1 ಖಾಯಿಲೆಗೆ ನೀಡುವ ಚಿಕಿತ್ಸೆಯನ್ನೇ ನೀಡಲಾಗಿದೆ. ಇದರಿಂದಾಗಿ ಅವರ ಕಿಡ್ನಿ, ಲಂಗ್ಸ್ ಸೇರಿದಂತೆ ದೇಹದ ಎಲ್ಲಾ ಅಂಗಾಂಗಗಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. ಮಧುಕರ್ ಶೆಟ್ಟಿಯವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದ ಸಂದರ್ಭದಲ್ಲಿ ಕಾಂಟಿನೆಂಟಲ್ ಆಸ್ಪತ್ರೆಯ ವೈದ್ಯರು ಮಧುಕರ್ ಶೆಟ್ಟಿಯವರ ದೇಹ‌ ಸ್ಥಿತಿಯ ಬಗ್ಗೆ ಬೆಂಗಳೂರಿನ ನಾರಾಯಣ ಹೃದಯಾಲಯದ ಖ್ಯಾತ ವೈದ್ಯ ದೇವಿಪ್ರಸಾದ್ ಅವರನ್ನೂ ಸಂಪರ್ಕಿಸಿದ್ದರು ಎನ್ನುವ ಮಾಹಿತಿ‌ ತಿಳಿದು ಬಂದಿದೆ.

ದೇಹಸ್ಥಿತಿಯ‌ ಲಕ್ಷಣಗಳನ್ನು ವೈದ್ಯರಿಂದ ಪಡೆದಿದ್ದ ಡಾ.ದೇವಿಪ್ರಸಾದ್ ಮಧುಕರ್ ಶೆಟ್ಟಿಯವರಿಗೆ ಹೃದಯ ಸಂಬಂಧಿ ಸಮಸ್ಯೆಯಾಗಿತ್ತು ಎನ್ನುವುದನ್ನು ದೃಡಪಡಿಸಿದ್ದರು ಎನ್ನಲಾಗಿದೆ.

ಅತ್ಯಂತ ಉನ್ನತ ಶ್ರೇಣಿಯ ಅಧಿಕಾರಿಯನ್ನು ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯ‌ ವೈದ್ಯರು ತಮ್ಮ ದಿವ್ಯ ನಿರ್ಲಕ್ಷ್ಯದಿಂದ ಬಲಿತೆಗೆದು‌ಕೊಂಡಿದ್ದಾರೆ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಉನ್ನತ‌ ಪೋಲಿಸ್ ಅಧಿಕಾರಿಗೇ ಇಂಥಹ ನಿರ್ಲಕ್ಷ್ಯ ದ ತೋರಿದ ವೈದ್ಯರು ಮುಂದೆ ಜನಸಾಮಾನ್ಯನ ಪಾಡೇನು ಎನ್ನುವ ಪ್ರಶ್ನೆ ಉದ್ಭವಿಸಿದೆ. ಮಧುಕರ್ ಶೆಟ್ಟಿ‌ ಸಾವಿನ ಹಿಂದಿರುವ ಎಲ್ಲಾ ರಹಸ್ಯ, ನಿರ್ಲಕ್ಷ್ಯ ಗಳ ತನಿಖೆಯಾಗಬೇಕಿದೆ.