DAKSHINA KANNADA
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಗಲಭೆಗೆ ಕುಮ್ಮಕ್ಕು ಇಬ್ಬರ ಗಡಿಪಾರು

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಗಲಭೆಗೆ ಕುಮ್ಮಕ್ಕು ಇಬ್ಬರ ಗಡಿಪಾರು
ಮಂಗಳೂರು ಡಿಸೆಂಬರ್ 30: ಇತ್ತೀಚೆಗೆ ಜಿಲ್ಲೆಯಲ್ಲಿ ಪದೇ ಪದೇ ಮತೀಯ ಗಲಭೆಗಳಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಗಲಭೆ ಸೃಷ್ಠಿಸುತ್ತಿರುವ ಆರೋಪದ ಮೇಲೆ ಇಬ್ಬರನ್ನು 6 ತಿಂಗಳು ಗಳ ಕಾಲ ಗಡಿಪಾರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಜಿಲ್ಲೆಯಲ್ಲಿ ನಡೆಯುವ ಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಆರೋಪದ ಮೇಲೆ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಟ್ಟಣದ ನಿವಾಸಿಗಳಾದ ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಶೆಟ್ಟಿ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮುಖಂಡ ಖಲೀಲ್ ಎಂಬುವವರನ್ನು ಆರು ತಿಂಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ಈ ಆರೋಪಿಗಳು ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾರೆ. ಜೂನ್ ತಿಂಗಳಲ್ಲಿ ಪರಸ್ಪರ ಹಲ್ಲೆ ನಡೆಸಿ ಮತೀಯ ಗಲಭೆಗೆ ಕಾರಣರಾಗಿದ್ದರು’ ಎಂದು ದಕ್ಷಿಣ ಕನ್ನಡ ಎಸ್ಪಿ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಈ ಇಬ್ಬರನ್ನು ಗಡಿಪಾರಿಗೆ ಆದೇಶ ನೀಡುವಂತೆ ಎರಡು ತಿಂಗಳ ಹಿಂದೆ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಇಬ್ಬರ ಗಡಿಪಾರಿಗೆ ಆದೇಶ ನೀಡಿದ್ದು, ಈ ಇಬ್ಬರು ಜಿಲ್ಲೆಯಿಂದ ಹೊರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.