Connect with us

    DAKSHINA KANNADA

    ದಕ್ಷಿಣ ಕನ್ನಡ ಅನ್​ಲಾಕ್​ : ಬೆಳಗ್ಗೆ 7 ರಿಂದ ಮಧ್ಯಾಹ್ನ 1ರ ವರೆಗೆ ರಿಲೀಫ್​​​

    ಮಂಗಳೂರು: ದ.ಕ ಜಿಲ್ಲೆಯಲ್ಲಿ ನಾಳೆಯಿಂದ ಅಗತ್ಯ ಸಾಮಗ್ರಿಗಳ ಖರೀದಿಗೆ ಬೆಳಗ್ಗೆ 7ರಿಂದ 1ರ ವರೆಗೆ ಅವಕಾಶ ನೀಡಲಾಗಿದೆ. ವಾರಾಂತ್ಯ ಕರ್ಫ್ಯೂ ಮುಂದುವರಿಯಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅಲ್ಲದೆ ಮುಂದಿನ ಐದಾರು ದಿನಗಳಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾದಲ್ಲಿ ಲಾಕ್​​​ಡೌನ್ ಪೂರ್ಣ ಸಡಿಲಿಕೆ ಮಾಡಲು ಅವಕಾಶ ಆಗಲಿದೆ ಎಂದಿದ್ದಾರೆ.

    ನಗರದಲ್ಲಿಂದು ಮಾತನಾಡಿದ ಅವರು, ಲಾಕ್​ಡೌನ್​ ಸಡಿಲಿಕೆ ಇರುವ ಅವಧಿಯಲ್ಲಿ ಉತ್ಪಾದನಾ ಘಟಕಗಳು ಕಾರ್ಯಾಚರಿಸಲು, ಕಟ್ಟಡ ಕಾಮಗಾರಿ, ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಅನಗತ್ಯವಾಗಿ ಯಾರಿಗೂ ಸಂಚರಿಸಲು ಅವಕಾಶವಿಲ್ಲ‌ ಎಂದಿದ್ದಾರೆ. ರಾಜ್ಯಾದ್ಯಂತ ಸೋಮವಾರ ಬೆಳಗ್ಗೆ 8 ಗಂಟೆಗೆ ಲಸಿಕಾ ಮೇಳಕ್ಕೆ ಚಾಲನೆ ದೊರೆಯಲಿದೆ. ಸಿಎಂ ಲಸಿಕಾ ಮೇಳವನ್ನು ಉದ್ಘಾಟಿಸಲಿದ್ದು, 10 ಲಕ್ಷ ಡೋಸ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

    ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಸಂಸದರು, ಶಾಸಕರು ಹಾಗೂ ನಾವೆಲ್ಲಾ ಒಟ್ಟು ಸೇರಿ ಲಸಿಕಾ ಮೇಳ ಉದ್ಘಾಟನೆ ಮಾಡಲಿದ್ದೇವೆ. ಜಿಲ್ಲೆಯಲ್ಲಿ 30 ಸಾವಿರ ಡೋಸ್ ಕೋವಿಶೀಲ್ಡ್ ಹಾಗೂ 9 ಸಾವಿರ ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ. ದ.ಕ ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರು 18 ಲಕ್ಷ ಮಂದಿಯಿದ್ದು, ಅದರಲ್ಲಿ 6.40 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ‌ ಎಂದರು.

    ಜಿಲ್ಲೆಯಲ್ಲಿ ಶನಿವಾರ 10 ಸಾವಿರ ಮಂದಿಗೆ ಕೋವಿಡ್​ ತಪಾಸಣೆ ಆಗಿದ್ದು, ಅದರಲ್ಲಿ ಶೇ.7.50ರಷ್ಟು ಮಂದಿಗೆ ಸೋಂಕು ಪತ್ತೆಯಾಗಿದೆ. ಇಂದು 10,400 ಮಂದಿಯ ತಪಾಸಣೆಯಲ್ಲಿ ಶೇ.5.50 ಪಾಸಿಟಿವಿಟಿ ರೇಟ್ ಪತ್ತೆಯಾಗಿದೆ. ಆದ್ದರಿಂದ ಮುಂದಿನ ಕೆಲ ದಿನಗಳಾದರೂ ಕಠಿಣ ನಿರ್ಬಂಧ ವಿಧಿಸುವುದು ಅನಿವಾರ್ಯವಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply