ಮಂಗಳೂರು ಜೂನ್ 23: ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ (78) ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2010ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿ ಅವರು ಅಧಿಕಾರ ಸ್ವೀಕರಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳ ರಾಜ್ಯದ 200ಕ್ಕೂ ಅಧಿಕ ಜಮಾಅತ್ ಗಳ ಖಾಝಿಯಾಗಿದ್ದರು. ಮಂಗಳೂರಿನ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜುಮಾ ಮಸೀದಿ ಪ್ರಮುಖರು ತಿಳಿಸಿದ್ದಾರೆ.

ದ.ಕ. ಜಿಲ್ಲಾ ಖಾಝಿ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನಿಧನಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ದೀರ್ಘಕಾಲ ಧಾರ್ಮಿಕ ಮಾರ್ಗದರ್ಶನ ನೀಡಿದ ಮುಸ್ಲಿಯಾರ್ ಅವರು ತಮ್ಮ ಜೀವನವನ್ನೆಲ್ಲಾ ಧರ್ಮ, ಶಿಕ್ಷಣ ಹಾಗೂ ಸಮಾಜ ಸೇವೆಗೆ ಸಮರ್ಪಿಸಿ ಸಾವಿರಾರು ಜನರಿಗೆ ದಾರಿದೀಪರಾಗಿದ್ದರು. ಅವರ ಸರಳತೆ, ಆಳವಾದ ಜ್ಞಾನ ಹಾಗೂ ಸಮನ್ವಯದ ಮನೋಭಾವವು ಎಲ್ಲರಿಗೂ ಪ್ರೇರಣೆಯಾಗಿತ್ತು. ಅವರ ಅಗಲಿಕೆ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಸಮಸ್ತ ಸಮಾಜಕ್ಕೂ ಅಪಾರ ನಷ್ಟವಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಧಾರ್ಮಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು ಎಂದು ಖಾದರ್ ತಿಳಿಸಿದ್ದಾರೆ.