ಮಂಗಳೂರು, ಜನವರಿ 4: ತುಳುನಾಡಿನಲ್ಲಿ ದೈವ- ದೇವಸಸ್ಥಾನದ ಜಾತ್ರೋತ್ಸವ ಸಂದರ್ಭ ನಡೆಯುತ್ತಿರುವ ಕೋಳಿ ಅಂಕ ವಿಚಾರದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಚಿಲ್ಲರೆ ರಾಜಕೀಯ ಮಾಡಲು ಹೊರಟಿದ್ದಾರೆ. ಈ ನೆಲದ ಬಗ್ಗೆ ನಿಜವಾಗಿಯೂ ಬಿಜೆಪಿ ನಾಯಕರಿಗೆ ಆಸಕ್ತಿ, ಕಾಳಜಿ ಇದ್ದಿದ್ದರೆ ಅಧಿವೇಶನ ಸಂದರ್ಭ ಯಾಕೆ ಚರ್ಚೆ ಮಾಡದೆ ಮೌನವಾಗಿದ್ದರು? ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸಬಹುದಿತ್ತಲ್ವೇ? ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.

ತುಳುನಾಡಿನ ದೈವರಾಧನೆ, ಈ ನೆಲದ ಸಂಸ್ಕೃತಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ, ಮಾತ್ರವಲ್ಲದೆ ಸದಾ ಬೆಂಬಲ ನೀಡುತ್ತಿದೆ. ಈ ನೆಲದ ಜಾನಪದ ಕ್ರೀಡೆ ಕಂಬಳಕ್ಕೆ ಅನುದಾನ, ದೈವ-ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ಸೇರಿದಂತೆ ಕರಾವಳಿ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿದೆ.
ಇದನ್ನೂ ಓದಿ- ಕಂಕನಾಡಿ ಗರೋಡಿ ಕ್ಷೇತ್ರ ವರ್ಷಾವಧಿ ಜಾತ್ರೆಯ ಕೋಳಿ ಅಂಕಕ್ಕೂ ವಿಘ್ನ – ಪೊಲೀಸರ ಷರತ್ತಿಗೆ ವಿರೋಧ
ಜಾತ್ರೋತ್ಸವ ಸಂದರ್ಭ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಆದರೆ ಪೊಲೀಸ್ ಅಧಿಕಾರಿಗಳು ಕಾನೂನು ಕಾರಣದಿಂದ ಕೋಳಿ ಅಂಕಕ್ಕೆ ಅವಕಾಶ ನೀಡುತ್ತಿಲ್ಲ. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಶೋಭೆಯಲ್ಲ. ಬಿಜೆಪಿಯವರ ಮೌನವೇ ಕೋಳಿ ಅಂಕ ವಿಚಾರ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದೇ ಬಿಜೆಪಿಯ ಉದ್ದೇಶವಾಗಿದೆ ಎಂದಿದ್ದಾರೆ.



