ಮಂಗಳೂರು ಸೆಪ್ಟೆಂಬರ್ 15: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು 2024-25ನೇ ಸಾಲಿನಲ್ಲಿ ರೂ.1174.00 ಕೋಟಿಗಳಷ್ಟು ರೂ. ವ್ಯವಹಾರ ಮಾಡಿದ್ದು, ರೂ.12.79 ಕೋಟಿ ನಿವ್ವಳ ಲಾಭ ದಾಖಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆ ಒಳಗೊಂಡಂತೆ 751 ಹಾಲು ಸಂಘಗಳು 3.97 ಲಕ್ಷ ಲೀಟರ್ ಹಾಲು ಶೇಖರಣೆ ಮಾಡುತ್ತಿದೆ. ಹಾಲಿನ ಶೇಖರಣೆ 2024-25 ನೇ ಸಾಲಿನಲ್ಲಿ ದಿನಕ್ಕೆ 3.42 ಲಕ್ಷ ಲೀಟರ್ ಸಂಗ್ರಹಣೆಯಾಗಿದ್ದು ಪ್ರಸ್ತುತ ಸಾಲಿನಲ್ಲಿ ಶೇ.16ರಷ್ಟು ಏರಿಕೆಯಾಗಿದ್ದು, 3.97 ಲಕ್ಷ ಲೀಟರ್‌ನಷ್ಟು ಹಾಲು ಸಂಗ್ರಹಣೆಯಾಗುತ್ತಿದೆ ಎಂದರು.
ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರಿನಲ್ಲಿ ಒಕ್ಕೂಟಕ್ಕೆ 10.30 ಎಕರೆ ಸರಕಾರಿ ಜಾಗ ಒದಗಿಸಿರುವುದು ನಮ್ಮ ಯೋಜನೆ ವಿಸ್ತರಣೆಗೆ ಅನುಕೂಲವಾಗಿದೆ. ರಾಜ್ಯ ಸರಕಾರದ ಪ್ರೋತ್ಸಾಹಧನ ಜೂನ್‌ವರೆಗೆ ಬಂದಿದ್ದು, ಉಳಿದ ಹಣ ಸಾಮಾನ್ಯವಾಗಿ ಏಕಕಂತಿನಲ್ಲಿ ಬರುತ್ತದೆ. ರೈತ ಕಲ್ಯಾಣ ಟ್ರಸ್ಟ್ 2024-25 ನೇ ಸಾಲಿನಲ್ಲಿ ಒಟ್ಟು ರೂ.2.05 ಕೋಟಿಯಷ್ಟು ಮೊತ್ತವನ್ನು ರೈತರ ಮರಣ, ವೈದ್ಯಕೀಯ ವೆಚ್ಚ, ರಾಸುಗಳ ಮರಣಕ್ಕೆ ಪಾವತಿಸಲಾಗಿದೆ. ರೈತರ ರಾಸುಗಳಿಗೆ ವಿಮಾ ಯೋಜನೆಯಲ್ಲಿ ಒಟ್ಟು 30629 ರಾಸುಗಳಿಗೆ ವಿಮೆಯನ್ನು ಮಾಡಿಸಲಾಗಿದ್ದು, 1177 ಸಂಖ್ಯೆಯಷ್ಟು ಕ್ಲೇಮ್ ನೀಡಲಾಗಿದೆ ಎಂದರು.



