ನಾಳೆ ನಡೆಯುವ ಪ್ರಜಾಪ್ರಭುತ್ವ ಹಬ್ಬಕ್ಕೆ ಸಜ್ಜಾದ ದಕ್ಷಿಣಕನ್ನಡ ಜಿಲ್ಲಾಡಳಿತ

ಮಂಗಳೂರು ಏಪ್ರಿಲ್ 17 : ಮುಕ್ತ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಗೆ ಜಿಲ್ಲೆ ಸಜ್ಜಾಗಿದ್ದು ಒಟ್ಟು 8920 ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ನಡೆದ ಮಸ್ಟರಿಂಗ್‍ನಲ್ಲಿ ಎಲ್ಲ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಯಾ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾ ಸಾಮಗ್ರಿಗಳಾದ ಇವಿಎಂ, ವಿವಿಪ್ಯಾಟ್‍ಗಳ ಜೊತೆಗೆ ನಮೂನೆಗಳನ್ನು ಹಾಗೂ ಲಕೋಟೆಗಳೊಂದಿಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಬಸ್‍ಗಳೊಂದಿಗೆ ಮತಗಟ್ಟೆಗಳಿಗೆ ಸಿಬ್ಬಂದಿಗಳು ತೆರಳಿದ್ದಾರೆ.

ಚುನಾವಣಾ ಕರ್ತವ್ಯಕ್ಕಾಗಿ 668 ಬಸ್‍ಗಳಲ್ಲಿ ಸಿಬ್ಬಂದಿಗಳು ತಮಗೆ ನಿಗದಿಪಡಿಸಿದ ಸ್ಥಳಗಳಿಗೆ ತೆರಳಿ ಕರ್ತವ್ಯ ನಿರ್ವಹಿಸಲಿದ್ದು ಅಂತಿಮ ಹಂತದ ಸಿದ್ದತೆಗಳು ನಡೆದವು. 2230 ಪಿಆರ್‍ಒಗಳು, 2230 ಎಪಿಆರ್‍ಒಗಳು, 590 ರೂಟ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅವರವರ ಗಮ್ಯಕ್ಕೆ ತಲುಪಿಸುವ ವ್ಯವಸ್ಥೆಗಳಾಗಿವೆ.

15 ರಿಂದ 20 ಮತಗಟ್ಟೆಗಳಿಗೆ ಒಬ್ಬರು ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಇವರು ಮತಗಟ್ಟೆ ಸಿಬ್ಬಂದಿಗಳ ತಲುಪುವಿಕೆ, ಸುರಕ್ಷತೆ ಹಾಗೂ ಇವರಿಗೆ ಮೂಲಭೂತ ಸೌಕರ್ಯ, ಮೇಲ್ವಿಚಾರಣೆ ಮಾಡುವುದರೊಂದಿಗೆ ಮತದಾನದ ಹಿಂದಿನ ದಿನದಿಂದ ಅಂತಿಮಗೊಳ್ಳುವವರೆಗೆ ಅವರ ವ್ಯಾಪ್ತಿಯ ಮತಗಟ್ಟೆಗಳಲ್ಲಿನ ಎಲ್ಲ ಸಂಬಂಧಿತ ಪ್ರಕ್ರಿಯೆಗಳ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ.

ಪ್ರಸಕ್ತ ಸಾಲಿನಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ನಿರತ ಸಿಬ್ಬಂದಿಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಹೆಚ್ಚಿನ ಒತ್ತನ್ನು ನೀಡಲಾಗಿದೆ. ವಿಶೇಷವಾಗಿ ಅಕ್ಷರ ದಾಸೋಹ ಸಿಬ್ಬಂದಿಗಳಿಂದ ಊಟೋಪಾಚಾರದ ವ್ಯವಸ್ಥೆಗಳನ್ನು ಮಾಡಲಾಗಿದ್ದು ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಮತ್ತು ಅಲ್ಲಿರುವ ಪೊಲೀಸ್ ಸಿಬ್ಬಂದಿಗಳ ಸೌಕರ್ಯಕ್ಕೆ ವೆಲ್ಪೇರ್ ಕಿಟ್‍ಗಳನ್ನು ಒದಗಿಸಲಾಗಿದೆ. ಈ ಕಿಟ್‍ಗಳಲ್ಲಿ ಟೂತ್‍ಪೇಸ್ಟ್, ಸೋಪ್, ತೆಂಗಿನೆಣ್ಣೆ, ಸೊಳ್ಳೆ ನಿವಾರಕ ಬತ್ತಿ, ಬಾಚಣಿಕೆ, ಬೆಂಕಿಪೊಟ್ಟಣದ ಜೊತೆಗೆ ಮೆಡಿಕಲ್ ಕಿಟ್ ಜ್ವರದ ಮಾತ್ರೆ, ಓಆರ್‍ಎಸ್, ಬ್ಯಾಂಡೇಜ್, ಗೇಜ್ ಪ್ಯಾಡ್, ಅಯೋಡಿನ್ ಆಯಿಂಟ್‍ಮೆಂಟ್, ಕೈಗವಸುಗಳನ್ನು ಒಳಗೊಂಡಿದೆ.

ಮತದಾನ ದಿನದಂದು ಎಲ್ಲಾ 1861 ಮತಗಟ್ಟೆಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯ ಸಂಪೂರ್ಣ ವಿವರಣೆ ಪಡೆಯಲು ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಮಾಹಿತಿ ಸಂಪರ್ಕ ನೆಟ್‍ವರ್ಕ್‍ನ್ನು ಜಿಪಿಎಸ್ ಮುಖಾಂತರ ಕಲ್ಪಿಸಲಾಗಿದ್ದು, 110 ಮತಗಟ್ಟೆಗಳಿಂದ ನೇರವಾಗಿ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. 300 ಮೈಕ್ರೊ ಅಬ್ಸವರ್ರ್ಸ್‍ಗಳನ್ನು ನೇಮಿಸಲಾಗಿದೆ.

ಮತಗಟ್ಟೆಗಳಿಂದ ಸಿಬ್ಬಂದಿಗಳೊಂದಿಗೆ ಪ್ರತೀ ಮಾರ್ಗದಲ್ಲಿ ತೆರಳುವ ವಾಹನಗಳ ಮೇಲೆ ಕೇಂದ್ರ ನಿಯಂತ್ರಣ ಕೊಠಡಿಯಿಂದ ಗಮನಿಸಬಹುದಾಗಿದೆ. ಎಂತಹ ಸಂದಿಗ್ಧ ಪರಿಸ್ಥಿತಿ ಬಂದರೂ ನಿಭಾಯಿಸಲು, ಸಮಸ್ಯೆ ಎದುರಾದ ಮತಗಟ್ಟೆಗಳನ್ನು ಐದು ನಿಮಿಷಗಳೊಳಗೆ ತಲುಪಿಸಲು ವ್ಯವಸ್ಥೆಯನ್ನು ಮಾಡಲಾಗಿದೆ.

ಎಫ್‍ಎಸ್‍ಟಿ ತಂಡಗಳು ಮತದಾನ ಪ್ರಕ್ರಿಯೆಯನ್ನು ನ್ಯಾಯ ಹಾಗೂ ಮುಕ್ತವಾಗಿ ನಡೆಸಲು ಸರ್ವಸನ್ನದ್ದವಾಗಿದ್ದು ಮತದಾನ ಪ್ರಕ್ರಿಯೆಯನ್ನು ಅವ್ಯವಸ್ಥಿತವಾಗಿಸಲು ಅವಕಾಶ ನೀಡಲಾಗುವುದಿಲ್ಲ. ಈಗಾಗಲೇ ಸದಾಚಾರ ಸಂಹಿತೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಬಹುಮಾಧ್ಯಮಗಳ ಮೂಲಕ ನೀಡಲಾಗಿದ್ದು, ನಿಷೇಧಾಜ್ಞೆಯನ್ನು ಹೇರಲಾಗಿದೆ.

ಮತದಾನಕ್ಕೆ ಅನುಕೂಲವಾಗುವಂತೆ ಕಾರ್ಮಿಕರನ್ನೊಳಗೊಂಡಂತೆ ಎಲ್ಲರಿಗೂ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ.
ಇದಲ್ಲದೆ ಜಿಲ್ಲೆಯಲ್ಲಿ ಸಖಿ ಮತಗಟ್ಟೆ, ವಿಕಲಚೇತನರಿಗಾಗಿ ವಿಶೇಷ ಮತಗಟ್ಟೆಗಳು, ಪಾರಂಪರಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪಾರಂಪರಿಕ ಮತಗಟ್ಟೆಗಳು ಬೆಳ್ತಂಗಡಿಯ ಶ್ರೀ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳದಲ್ಲಿ, ಮಂಗಳೂರು ಉತ್ತರದಲ್ಲಿ ಕೇಂದ್ರೀಯ ಮಾಡೆಲ್ ರೆಸಿಡೆನ್ಷಿಯಲ್ ಸ್ಕೂಲ್ ಮದ್ಯ ಸುರತ್ಕಲ್‍ನಲ್ಲಿ, ಬಂಟ್ವಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾನ ಪುತ್ತೂರಿನ ಬಲ್ನಾಡ್‍ನ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯದ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಡಡ್ಕ ಇಲ್ಲಿ ಸ್ಥಾಪಿಸಲಾಗಿವೆ.

ಮತಗಟ್ಟೆಗಳಲ್ಲಿ ಪಿಆರ್‍ಒ ಗಳು ಸರ್ವೋಚ್ಛ ಅಧಿಕಾರಿಗಳಾಗಿದ್ದು ಅವರ ನಿರ್ಧಾರವೇ ಅಂತಿಮ. ಮೊಬೈಲ್ ಫೋನುಗಳನ್ನು ಮತಗಟ್ಟೆಗಳಲ್ಲಿ ಬಳಸುವಂತಿಲ್ಲ.

Facebook Comments

comments