ವಾಯು ಚಂಡಮಾರುತ ಭೀತಿ ರಾಜ್ಯದ ಕರಾವಳಿಯ ಬಂದರುಗಳಲ್ಲಿ ಮುನ್ನೆಚ್ಚರಿಕೆ

ಮಂಗಳೂರು ಜೂನ್ 11: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ವಾಯು ಚಂಡಮಾರುತ ಉಂಟಾಗಿದೆ. ವಾಯು ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಕರಾವಳಿಯಿಂದ 500 ಕಿಮೀ. ದೂರದಲ್ಲಿ ಕೇಂದ್ರೀಕೃತವಾಗಿದ್ದು, ಗುಜರಾತ್ ಕಡೆಗೆ ಸಾಗುವ ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಲಕ್ಷದ್ವೀಪ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌ನಲ್ಲಿ ಭಾರೀ ಗಾಳಿ-ಮಳೆಯಾಗುವ ಸಾಧ್ಯತೆಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈಗಾಗಲೇ ಕರ್ನಾಟಕ ಕರಾವಳಿಯತ್ತ ರಭಸದ ಗಾಳಿ ಬೀಸುತ್ತಿದ್ದು ಇಂದು ಗಾಳಿಯ ವೇಗ 55ರಿಂದ 75 ಕಿ.ಮೀ. ವರೆಗೂ ತಲುಪುವ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ರಾಜ್ಯದ ಕರಾವಳಿಯ ಬಂದರುಗಳಲ್ಲಿ ಮುನ್ನೆಚ್ಚರಿಕೆಯ ಸಂಕೇತದ ಬಾವುಟ ಹಾರಿಸುವಂತೆ ಸೂಚನೆ ನೀಡಲಾಗಿದೆ.ಸಮುದ್ರದಲ್ಲಿ ಅಲೆಗಳ ಅಬ್ಬರ ತೀವ್ರವಾಗಿರುವ ಹಿನ್ನಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆಯೂ ಸೂಚಿಸಲಾಗಿದ್ದು ಉಳ್ಳಾಲ,ಸೋಮೇಶ್ವರ,ಪಣಂಬೂರು ಸೇರಿದಂತೆ ಬೀಚ್‌ಗಳಲ್ಲಿ ಈಗಾಗಲೇ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ವಾಯು ಭಾರ ಕುಸಿತ ಮತ್ತು ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ತುರ್ತು ಸೇವೆಗೆ ಟೋಲ್‌ಫ್ರೀ ಸಂಖ್ಯೆ 1077 ಸಂಪರ್ಕಿಸಲು ಕೋರಲಾಗಿದೆ. ಪೊಲೀಸರು, ತಟ ರಕ್ಷಕ ದಳ ಮತ್ತು ಜೀವ ರಕ್ಷಕ ಪಡೆಯನ್ನು ಎಲ್ಲ ಕಡೆಗಳಲ್ಲೂ ನಿಯೋಜಿಸಲಾಗಿದೆ. ಉಡುಪಿ ಜಿಲ್ಲೆಯಲ್ಲೂ ಕಡಲ ತೀರಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಮಲ್ಪೆ, ಬೈಂದೂರು, ಕಾಪು ಸೇರಿದಂತೆ ಹಲವು ಬೀಚ್‌ಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕ ಮತ್ತು ಕೇರಳ ಕರಾವಳಿಗೆ ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಆರೆಂಜ್‌ ಬಣ್ಣದ ಎಚ್ಚರಿಕೆ ನೀಡಲಾಗಿದೆ. ಜೂನ್ 11ರಿಂದ 13ರ ವರೆಗೆ ಕರ್ನಾಟಕ ಕರಾವಳಿಯಲ್ಲಿ ಹಳದಿ ಬಣ್ಣದ ಎಚ್ಚರಿಕೆ ನೀಡಲಾಗಿದೆ.

Facebook Comments

comments