Connect with us

  DAKSHINA KANNADA

  ಸೈನೇಡ್ ಗೆ ಮತ್ತೆ ಕಂಟಕ

  ಬಂಟ್ವಾಳ,ಸೆಪ್ಟಂಬರ್ 13: ದೇಶ ಹಾಗೂ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸೈನೇಡ್ ಮೋಹನ್ ಮೇಲಿನ ನಾಲ್ಕನೇ ಪ್ರಕರಣವೂ ಸಾಬೀತಾಗಿದೆ.

  2003 ರಿಂದ 2009 ರ ವರೆಗಿನ 20 ಯುವತಿಯರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣ ಸೈನೇಡ್ ಮೋಹನ್ ಮೇಲಿದೆ. ಎರಡು ಪ್ರಕರಣದಲ್ಲಿ ಈಗಾಗಲೇ ಮೋಹನ್ ಕುಮಾರ್ ಗೆ ಮರಣದಂಡನೆ ಶಿಕ್ಷೆ ಪ್ರಕಟವಾಗಿದೆ. ಇದೀಗ ನಾಲ್ಕನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿದೆ.

  ಈ ಆರೋಪ ಸಂಬಂಧಿಸಿದಂತೆ ಸೆಪ್ಟಂಬರ್ 15 ಕ್ಕೆ ಶಿಕ್ಷೆ ಪ್ರಕಟವಾಗಲಿದೆ. ಜಿಲ್ಲಾ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಮೋಹನ್ ಕುಮಾರ್ ದೋಷಿ ಎಂದು ತೀರ್ಪು ನೀಡಿದೆ. 2003 ರಿಂದ 2009 ರ ನಡುವೆ ಸುಮಾರು 20 ಕ್ಕೂ ಮಿಕ್ಕಿದ ಬಡ ಕುಟುಂಬಕ್ಕೆ ಸೇರಿದ ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ , ಅವರಲ್ಲಿದ್ದ ಚಿನ್ನಾಭರಣಗಳನ್ನು ಎಗರಿಸಿ ಕೊಲೆ ನಡೆಸುತ್ತಿದ್ದ ವಿಚಿತ್ರ ವ್ಯಕ್ತಿ ಮೋಹನ್ ಕುಮಾರ್ ಆಗಿದ್ದರು.

  ದಕ್ಷಿಣಕನ್ನಡ ಜಿಲ್ಲೆಯ ಶಾಲೆಯೊಂದರಲ್ಲಿ ಅಧ್ಯಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೋಹನ್ ಕುಮಾರ್ ಬಂಟ್ವಾಳ ತಾಲೂಕಿನ ಕನ್ಯಾನ ಸಮೀಪದ ಮನೆಯಲ್ಲಿ ತನ್ನ ತಾಯಿಯೊಂದಿಗೆ ನೆಲೆಸಿದ್ದನು.

  ಶಾಲೆಗೆ ಸರಿಯಾಗಿ ಹೋಗದೆ ಇದ್ದಲ್ಲೆಲ್ಲಾ ತಿರುಗಾಡಿಕೊಂಡಿದ್ದ ಮೋಹನ್ ಕುಮಾರ್ ತನ್ನ ತಾಯಿಯಲ್ಲಿ ಯಾವುದೇ ವಿಚಾರವನ್ನೂ ತಿಳಿಸುತ್ತಿರಲಿಲ್ಲ. ಕಾರ್ಯಕ್ರಮಗಳಲ್ಲೋ ಅಥವಾ ಇನ್ಯಾವುದೋ ಸಭೆ ಸಮಾರಂಭಗಳಲ್ಲಿ ಪರಿಚಿತರಾದ ಯುವತಿಯರನ್ನು ತನ್ನ ಪ್ರೇಮದ ಬಲೆಗೆ ಬೀಳಿಸಿಕೊಳ್ಳುತ್ತಿದ್ದ.

  ಆ ಬಳಿಕ ಯುವತಿಯರನ್ನು ತನ್ನ ಜೊತೆಗೆ ಬೆಂಗಳೂರು, ಮೈಸೂರು ಹಾಗೂ ಮಡಿಕೇರಿ ಗೆ ಕರೆದುಕೊಂಡು ಹೋಗುತ್ತಿದ್ದ ಈ ಸೈಕೊ ಮೋಹನ್. ಮನೆ ಬಿಟ್ಟು ತನ್ನೊಂದಿಗೆ ಬರುವ ಯುವತಿಯಲ್ಲಿ ಮನೆಯಿಂದ ಹೊರಡುವಾಗ ಮದುಮಗಳಂತೆ ಶೃಂಗರಿಸಿ ಬರುವಂತೆ ಹೇಳುತ್ತಿದ್ದ. ಅದೇ ಪ್ರಕಾರ ಯುವತಿಯರು ಮನೆಯಿಂದ ಮದುಮಗಳಂತೆ ಶೃಂಗರಿಸಿ, ತನ್ನ ಚಿನ್ನಾಭರಣಗಳನ್ನೆಲ್ಲಾ ಧರಿಸಿ ಮೋಹನ್ ಕುಮಾರ್ ಜೊತೆಗೆ ಬರುತ್ತಿದ್ದರು.

  ಆ ಬಳಿಕ ಮೋಹನ್ ಕುಮಾರ್ ತನ್ನ ಜೊತೆ ಬಂದ ಯುವತಿಯನ್ನು ಲಾಡ್ಡ್ ನಲ್ಲಿ ನಿಲ್ಲಿಸಿ ಒಂದು ರಾತ್ರಿ ಸಂಪೂರ್ಣ ಆಕೆಯನ್ನು ಅತ್ಯಾಚಾರ ಮಾಡಿದ ಬಳಿಕ ಆಕೆಗೆ ಕೆಲಸ ಕೊಡಿಸುವುದಾಗಿ ಹೇಳಿ ಲಾಡ್ಜ್ ನಿಂದ ಆಕೆಯನ್ನು ಪಕ್ಕದಲ್ಲೇ ಇರುವ ಸರಕಾರಿ ಬಸ್ ನಿಲ್ದಾಣಕ್ಕೆ ಕರೆದೊಯ್ದುತ್ತಿದ್ದನು. ಈ ಸಂದರ್ಭದಲ್ಲಿ ಯುವತಿಯರೊಂದಿಗೆ ಅವರು ಮನೆಯಿಂದ ತಂದಿದ್ದ ಚಿನ್ನಾಭರಣಗಳನ್ನು ಲಾಡ್ಜ್ ನಲ್ಲೇ ಬಿಟ್ಟು ಬರುವಂತೆ ಹೇಳುತ್ತಿದ್ದ. ಬಸ್ ನಿಲ್ದಾಣದಲ್ಲಿ ಆಕೆಗೆ ಗರ್ಭ ನಿರೋಧಕ ಮಾತ್ರೆ ಎಂದು ಸೈನೇಡ್ ಅನ್ನು ನೀಡಿ ಬಾತ್ ರೂಂ ನಲ್ಲಿ ತಿನ್ನುವಂತೆ ಪ್ರೇರೇಪಿಸುತ್ತಿದ್ದ. ಸೈನೇಡ್ ತಿಂದ ಯುವತಿ ಸಾಯುವುದನ್ನು ಖಾತರಿಪಡಿಸಿಕೊಂಡ ಬಳಿಕ ನೇರವಾಗಿ ಲಾಡ್ಜ್ ಗೆ ತೆರಳಿ ಯುವತಿಯ ಆಭರಣಗಳ ಜೊತೆ ರೂಂ ತೆರವುಗೊಳಿಸಿದ ಬಳಿಕ ಮತ್ತೆ ಊರಿಗೆ ಆಗಮಿಸುತ್ತಿದ್ದ.

  ಹೀಗೆ ಸರಕಾರಿ ಬಸ್ ನಿಲ್ದಾಣಗಳಲ್ಲಿ ಸಾವಿಗೀಡಾದ ಯುವತಿಯರ ಶವವನ್ನು ಸ್ಥಳೀಯ ಪೋಲೀಸರು ಗುರುತಿಸಿ ಅದನ್ನು ಅಸಹಜ ಸಾವು ಎನ್ನುವ ಪ್ರಕರಣವನ್ನು ದಾಖಲಿಸಿ ಕೇಸ್ ಫೈಲ್ ಮುಚ್ಚುತ್ತಿದ್ದರು. ಜಿಲ್ಲೆಯಲ್ಲಿ ಯುವತಿಯರ ಈ ರೀತಿಯ ನಾಪತ್ತೆ ಪ್ರಕರಣವನ್ನು ಭೇಧಿಸಲು ಅಂದಿನ ಬಂಟ್ವಾಳ ವೃತ್ತ ನಿರೀಕ್ಷಕರಾಗಿದ್ದ ನಂಜುಡೇಗೌಡ ತಂಡಕ್ಕೆ ಮೋಹನ್ ಕುಮಾರ್ ಬಗ್ಗೆ ಯುವತಿಯೊಬ್ಬಳ ಮಾಹಿತಿಯ ಹಿನ್ನಲೆಯಲ್ಲಿ ಸಂಶಯ ವ್ಯಕ್ತವಾಯಿತು.

  ಬಂಟ್ವಾಳದ ಯುವತಿಯೊಬ್ಬಳ ಸಂಪರ್ಕಕ್ಕೆ ಯತ್ನಿಸುತ್ತಿದ್ದ ಮೋಹನ್ ಕುಮಾರ್ ನನ್ನು ಆಕೆಯ ಸಹಾಯದಿಂದಲೇ ಉಪಾಯದಿಂದಲೇ ಬಂಟ್ವಾಳಕ್ಕೆ ಕರೆಸಿಕೊಂಡಿದ್ದ ನಂಜುಡೇಗೌಡ ಮೋಹನ್ ಕುಮಾರ್ ನನ್ನು ಸಂಶಯದ ಮೇರೆಗೆ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಪೋಲೀಸ್ ಡಿಗ್ರಿ ಬಳಸಿ ಬಾಯಿ ಬಿಡಿಸಿದಾಗ ಎಲ್ಲ ಪ್ರಕರಣವೂ ಮೋಹನ್ ಕುಮಾರ್ ನ ಬಾಯಿಯಿಂದ ಬಿಡಿಬಿಡಿಯಾಗಿ ಬಂದಿತ್ತು. ಆ ಬಳಿಕವೇ ಮೋಹನ್ ಕುಮಾರ್ ಹೆಸರು ಸೈನೇಡ್ ಮೋಹನ್ ಎಂದು ಬದಲಾಗಿತ್ತು.

  ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸೈನೇಡ್ ಮೋಹನ್ ಇದೀಗ ಮಂಗಳೂರು ಕಾರಾಗೃಹದಲ್ಲಿ ಬಂಧಿಯಾಗಿದ್ದು, ಇನ್ನೂ ಹಲವು ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ವಿಚಾರಣೆ ನಡೆಯಲಿದೆ. ಇಲ್ಲಿ ಗಮನಿಸಬೇಕಾದ ಸ್ವಾರಸ್ಯಕರ ಕಥೆಯೆಂದರೆ, ಮೋಹನ್ ಕುಮಾರ್ ತನ್ನ ಮೇಲಿದ್ದ ಎಲ್ಲಾ ಪ್ರಕರಣಕ್ಕೂ ತಾನೇ ವಕೀಲನಂತೆಯೂ ವಾದಿಸುತ್ತಿದ್ದ. ತನ್ನ ಕುಕೃತ್ಯವನ್ನು ಮರೆ ಮಾಚಲು ಹಲವು ತಂತ್ರಗಳನ್ನು ಆತ ಹೆಣೆದಿದ್ದರೂ, ಕೆಲವು ತಂತ್ರಗಳು ಆತನ ಕುತ್ತಿಗೆಗೇ ನೇಣಾಗಿ ಪರಿಣಮಿಸಿದ ಕಾರಣ ಇದೀಗ ಕಂಬಿ ಎಣಿಸುವಂತಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply