ನವದೆಹಲಿ ನವೆಂಬರ್ 20: ಶಾಲೆಯಲ್ಲಿ ಶಿಕ್ಷಕರ ವರ್ತನೆಗೆ ಬೇಸತ್ತ ಬಾಲಕನೊಬ್ಬ ಡೆತ್ ನೋಟ್ ಬರೆದಿಟ್ಟು ದೆಹಲಿ ಮೆಟ್ರೋಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಲಕ ತನ್ನ ಡೆತ್ ನೋಟ್ ನಲ್ಲಿ ಬರೆದಿರುವ ಸಾಲುಗಳು ತೀವ್ರ ಆಘಾತ ಸೃಷ್ಠಿಸಿದೆ. ದೆಹಲಿಯ ಪ್ರಮುಖ ಖಾಸಗಿ ಶಾಲೆಯಾದ ಸೇಂಟ್ ಕೊಲಂಬಾ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಶೌರ್ಯ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಆತನನ್ನು ಒಂದು ವರ್ಷದ ಕಾಲ ಶಾಲೆಯ ಶಿಕ್ಷಕರು ಅಪಹಾಸ್ಯ ಮಾಡಿ “ಕೆಟ್ಟದಾಗಿ ನಡೆಸಿಕೊಂಡರು” ಎಂದು ಆರೋಪಿಸಲಾಗಿದೆ.

ಬೆಳಿಗ್ಗೆ ಎಂದಿನಂತೆ ಮಗನನ್ನು ಶಾಲೆಗೆ ಬಿಟ್ಟೆ. ಮಧ್ಯಾಹ್ನ 2.45ರ ಸುಮಾರಿಗೆ ಕರೆಯೊಂದು ಬಂತು. ದೆಹಲಿ ಕೇಂದ್ರ ಭಾಗದಲ್ಲಿರುವ ರಾಜೇಂದ್ರ ಮೆಟ್ರೊ ನಿಲ್ದಾಣದ ಬಳಿ ಮಗ ತೀವ್ರವಾಗಿ ಗಾಯಗೊಂಡಿದ್ದಾನೆ ಎಂಬ ಸುದ್ದಿ ಆಘಾತ ತಂದಿತು. ಗಾಯಗೊಂಡ ಮಗನನ್ನು ಬಿಎಲ್ ಕಪೂರ್ ಆಸ್ಪತ್ರೆಗೆ ಕರೆತರುವಂತೆ ಕರೆ ಮಾಡಿದವರಿಗೆ ಮನವಿ ಮಾಡಿಕೊಂಡೆ. ಕುಟುಂಬದವರೊಂದಿಗೆ ಆಸ್ಪತ್ರೆಗೆ ಹೋದೆ. ಆದರೆ ಅಷ್ಟರೊಳಗೆ ಆತ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಶಾಲೆಯಲ್ಲಿ ಶಿಕ್ಷಕರೊಬ್ಬರು ಕಳೆದ ಕೆಲ ದಿನಗಳಿಂದ ಮಗನಿಗೆ ಬೆದರಿಕೆಯೊಡ್ಡುತ್ತಿದ್ದರು. ವರ್ಗಾವಣೆ ಪತ್ರ ನೀಡಿ ಶಾಲೆಯಿಂದ ಹೊರಹಾಕುವುದಾಗಿ ಹೆದರಿಸುತ್ತಿದ್ದರು ಎಂದು ಮಗನ ಸ್ನೇಹಿತರು ಹೇಳಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ನೀಡುತ್ತಿದ್ದ ಮಾನಸಿಕ ಕಿರುಕುಳ ಕುರಿತು ಸದಾ ತನ್ನ ತಾಯಿ ಬಳಿ ಮಗ ಹೇಳಿಕೊಳ್ಳುತ್ತಿದ್ದ. ಅದನ್ನು ಶಾಲೆಯ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಾಲಕನ ಚೀಲದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ‘ಈ ಚೀಟಿ ಯಾರಿಗೇ ದೊರೆತರೂ, ತಕ್ಷಣ ಈ ಸಂಖ್ಯೆಗೆ ಕರೆ ಮಾಡಿ. ನಾನು ತೆಗೆದುಕೊಂಡಿರುವ ಈ ನಿರ್ಧಾರಕ್ಕಾಗಿ ಕ್ಷಮೆ ಕೋರುತ್ತೇನೆ. ಆದರೆ ಶಾಲೆಯಲ್ಲಿ ಏನು ನಡೆದಿದೆಯೋ ಅದನ್ನು ಎದುರಿಸಲು ನನ್ನ ಬಳಿ ಇದನ್ನು ಹೊರತುಪಡಿಸಿ ಅನ್ಯ ಮಾರ್ಗವೇ ಇರಲಿಲ್ಲ’ ಎಂದು ಬಾಲಕ ಬರೆದಿದ್ದಾನೆ ಎಂದು ವರದಿಯಾಗಿದೆ. ‘ಜತೆಗೆ ತನ್ನ ಅಂಗಾಂಗಳು ಸುಸ್ಥಿತಿಯಲ್ಲಿದ್ದರೆ ಅವುಗಳನ್ನು ಅಗತ್ಯ ಇರುವವರಿಗೆ ದಾನ ಮಾಡಿ’ ಎಂದೂ ಬಾಲಕ ಮನವಿ ಮಾಡಿಕೊಂಡಿದ್ದಾನೆ.
20 ವರ್ಷದ ತನ್ನ ಅಣ್ಣನ್ನು ನೆನೆದಿರುವ ಬಾಲಕ, ಅವರ ಕ್ಷಮೆಯನ್ನೂ ಕೋರಿದ್ದಾನೆ. ಎಷ್ಟೋ ಬಾರಿ ಅವರಿಗೆ ನೋವಾಗುವಂತೆ ನಡೆದುಕೊಂಡಿದ್ದೇನೆ. ಆದರೆ ನಾನೊಬ್ಬ ಉತ್ತಮ ಮನಷ್ಯನಾಗಲು ಸಾಧ್ಯವಾಗದಿದ್ದಕ್ಕೆ ತಂದೆಗೆ ಮತ್ತು ಸದಾ ಬೆಂಬಲವಾಗಿ ನಿಂತ ತಾಯಿಗೆ ಧನ್ಯವಾದ ಹೇಳಿದ್ದಾನೆ.



