ತಿಥಿಗೆ ಕಾಗೆ ಬೇಕಾ ಕಾಗೆ….

ಮಂಗಳೂರು, ಜುಲೈ 12: ಯಾರಿಗೂ ಬೇಡವಾದ ಕಾಗೆ ಎಲ್ಲರಿಗೂ ನೆನಪಿಗೆ ಬರೋದು ವ್ಯಕ್ತಿಯ ಸಾವಾದಾಗ ಮಾತ್ರ.

ಹೌದು ಹಿಂದೂ ಸಂಪ್ರದಾಯದ ಪ್ರಕಾರ ಸತ್ತ ವ್ಯಕ್ತಿಯ ತಿಥಿಯ ಸಮಯದಲ್ಲಿ ಸತ್ತ ವ್ಯಕ್ತಿಗೆ ಇಡುವಂತಹ ವಾಯಸ ( ಬಾಳೆ ಎಲೆಯಲ್ಲಿ ಬಡಿಸುವ ವಿಶಿಷ್ಟ ಬೋಜನ ) ವನ್ನು ಕಾಗೆ ಮುಟ್ಟದೆ ಬೇರೆಯವರು ತಿಥಿ ಊಟ ಮಾಡುವಂತಿಲ್ಲ.

ಪಿತೃಗಳಿಗೆ ತಾವು ಬಡಿಸಿದ ವಾಯಸದಿಂದ ಸಂತೃಪ್ತವಾಗಿದೆಯೇ ಎನ್ನುವುದು ತಿಳಿಯುವುದೇ ಈ ಕಾಗೆಗಳ ಮೂಲಕ.

ಸತ್ತ ವ್ಯಕ್ತಿಯ ವೈಕುಂಟ ಸಮಾರಾಧನೆಯನ್ನು ವಾಯಸ ಬಡಿಸುವುದು ಎಲ್ಲಾ ಜಾತಿಗಳಲ್ಲೂ ಸರ್ವೇ ಸಾಮಾನ್ಯವಾಗಿದ್ದು, ಹೀಗೆ ಬಡಿಸಿದ ವಾಯಸವನ್ನು ಕಾಗೆಯು ಮುಟ್ಟದೇ ಹೋದಲ್ಲಿ ಪಿತೃಗಳು ಸಂತ್ರಪ್ತರಾಗಿಲ್ಲ ಎಂದೇ ತಿಳಿದುಕೊಳ್ಳಲಾಗುತ್ತಿದೆ.

ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಕಾಗೆಗಳ ಸಂತತಿಯೇ ನಶಿಸಿ ಹೋಗುವಂತಹ ಹಂತದಲ್ಲಿದೆ.

ಅದರಲ್ಲೂ ನಗರ ಪ್ರದೇಶಗಳಲ್ಲಿ ಕಾಗೆಗಳು ಕಾಣುವುದೇ ಒಂದು ಯೋಗ ಅನ್ನುವಂತಹ ಸ್ಥಿತಿಯೂ ನಿರ್ಮಾಣಗೊಂಡಿದೆ.

ಹೀಗಿರುವಾಗ ವೈಕುಂಟ ಸಮಾರಾಧನೆಯಂದು ಕಾಗೆಗಳಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಯನ್ನು ಹೆಚ್ಚಿನ ಜನರು ಅನುಭವಿಸಿಯೂ ಆಗಿದೆ.

ಆದರೆ ಇದೀಗ ಇಂಥ ಸಮಾರಂಭಗಳಿಗಾಗಿಯೇ ಕಾಗೆಗಳನ್ನು ಬಾಡಿಗೆಗೆ ಕೊಡುವ ವ್ಯವಸ್ಥೆ ಆರಂಭಗೊಂಡಿದೆ.

ಹೌದು ಉಡುಪಿ ಜಿಲ್ಲೆಯ ಕಾಪು ನಿವಾಸಿಯಾಗಿರುವ ಪ್ರಶಾಂತ್ ಪೂಜಾರಿ ಇಂಥಹುದೊಂದು ಸೇವೆಯ ಜೊತೆಗೆ ಬ್ಯುಸಿನೆಸ್ ಗೆ ಕೈ ಹಾಕಿದ್ದಾರೆ.

ವೈಕುಂಟ ಸಮಾರಾಧನೆಯ ದಿನ ಪಿತೃಗಳಿಗೆ ಬಡಿಸುವ ವಾಯಸವನ್ನು ಕಾಗೆ ತಿನ್ನಲೇ ಬೇಕಾದ ಅನಿವಾರ್ಯತೆಯಿರುವ ಕಾರಣ ಕಾಗೆಯನ್ನು ಕರೆತರುವ ಇವರಿಗೆ ಇದೀಗ ಭಾರೀ ಬೇಡಿಕೆಯೂ ಇದೆ.

ಸೇವೆಯಾಗಿ ಇದನ್ನು ಆರಂಭಿಸಬೇಕೆಂದಿರುವ ಪ್ರಶಾಂತ್ ಗೆ ತಿಥಿ ನಡೆಸುವ ಕುಟುಂಬದವರು ನೀಡಿದ  ದಕ್ಷಿಣೆಯನ್ನು ಸ್ವೀಕರಿಸಲಾಗುವುದಲ್ಲದೆ, ಸಮಾರಂಭ ನಡೆಯುವ ಸ್ಥಳಕ್ಕೆ ಹೋಗುವ ವಾಹನ ಬಾಡಿಗೆಯನ್ನು ಕುಟುಂಬದವರು ನೀಡಬೇಕಾಗುತ್ತದೆ.

ಮರಗಳಿಂದ ಆಸರೆಯಿಲ್ಲದೆ ಬಿದ್ದಿರುವ ಕಾಗೆ ಮರಿಗಳನ್ನು ಮನೆಗೆ ತಂದು ಸಾಕುತ್ತಿರುವ ಪ್ರಶಾಂತ್ ಬಳಿ ಇದೀಗ ಒಂದು ಕಾಗೆ ಮರಿಯಿದ್ದು, ತಿಥಿ ಸಮಯದಲ್ಲಿ ನಿರ್ವಹಿಸಬೇಕಾದ ಕಾರ್ಯದ ಟ್ರೈನಿಂಗ್ ಕೂಡಾ ಕಾಗೆಗೆ ನೀಡಲಾಗುತ್ತಿದೆ.

ಈ ವ್ಯವಸ್ಥೆಯನ್ನು ಪ್ರಶಾಂತ್ ಇನ್ನಷ್ಟೇ ಆರಂಭಿಸಬೇಕಿದ್ದು, ಈಗಾಗಲೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನೂ ಹಂಚಲಾರಂಭಿಸಿದ್ದಾರೆ.

Facebook Comments

comments