BELTHANGADI
ಧರ್ಮಸ್ಥಳ ಪ್ರಕರಣ ಎನ್‌ಐಎಗೆ ವಹಿಸಿ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೇರಳ ಸಂಸದ ಪತ್ರ

ಕೇರಳ ಜುಲೈ 20: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವಿನ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ)ಕ್ಕೆ ವಹಿಸುವಂತೆ ಕೇರಳದ ಸಿಪಿಐ ಸಂಸದ ಪಿ. ಸಂತೋಶ್ ಕುಮಾರ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ತಾವೇ ಹಲವು ಶವ ಹೂತುಹಾಕಿದ್ದಾಗಿ ದೇವಸ್ಥಾನದ ಮಾಜಿ ಸ್ವಚ್ಛತಾ ಕರ್ಮಿಯೊಬ್ಬರ ಹೇಳಿಕೆ ಬೆನ್ನಲ್ಲೇ ಪತ್ರ ಬರೆದಿದ್ದಾರೆ.
ಆ ಪತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳು ನಿರ್ಲಕ್ಷಿಸಲಾಗದ ವಾಸ್ತವವನ್ನು ಮುನ್ನೆಲೆಗೆ ತಂದಿವೆ. ವರ್ಷಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿಲ್ಲ’ ಎಂದು ಆರೋಪಿಸಿ, ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಒತ್ತಾಯಿಸಿದ್ದಾರೆ.

ಧರ್ಮಸ್ಥಳದಲ್ಲಿ 1995ರಿಂದ 2014ರ ವರೆಗೆ ಸ್ವಚ್ಛತಾ ಕಾರ್ಮಿಕನಾಗಿದ್ದ ವ್ಯಕ್ತಿಯೊಬ್ಬ ನೂರಾರು ಹೆಣಗಳನ್ನು ತಾನೇ ಹೂತು ಹಾಕಿದ್ದೇನೆಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದರೂ, ಕರ್ನಾಟಕ ಸರಕಾರ ತನಿಖೆಗೆ ಪೊಲೀಸ್ ತಂಡವನ್ನು ನೇಮಿಸಲು ವಿಫಲವಾಗಿದೆ. ಆತ ನೀಡಿರುವ ಹೇಳಿಕೆ ಆಘಾತಕಾರಿಯಾಗಿದ್ದು ಹೆಚ್ಚಾಗಿ ಅಪ್ರಾಪ್ತ ಮತ್ತು ಹರೆಯದ ಯುವತಿಯರು ಅತ್ಯಾಚಾರಕ್ಕೀಡಾಗಿ ಕೊಲೆಯಾಗಿದ್ದಾರೆ. ಆತನ ಹೇಳಿಕೆಯ ಹಿನ್ನೆಲೆಯಲ್ಲಿ ವಿಶೇಷ ತನಿಖೆಯಾಗಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ವ್ಯಕ್ತವಾಗುತ್ತಿದೆ. ವಿಶೇಷ ತನಿಖಾ ತಂಡ ನೇಮಿಸಬೇಕೆಂದು ಒತ್ತಾಯ ಕೇಳಿಬರುತ್ತಿದ್ದರೂ, ಕರ್ನಾಟಕ ಸರಕಾರ ಮೀನ ಮೇಷ ಎಣಿಸುತ್ತಿದೆ. ನಿಷ್ಪಕ್ಷಪಾತ ತನಿಖೆಯ ಉದ್ದೇಶದಿಂದ ಎನ್‌ಐಎ ತನಿಖೆ ನಡೆಸಬೇಕೆಂದು ಕೇರಳದ ಕಣ್ಣೂರಿನ ಸಿಪಿಐ ಮುಖಂಡ, ರಾಜ್ಯಸಭೆ ಸಂಸದ ಸಂತೋಷ್ ಕುಮಾರ್ ಒತ್ತಾಯಿಸಿದ್ದಾರೆ.