ಮೂಡಬಿದ್ರೆ ಮಾರ್ಚ್ 26: ನಿಡ್ಡೋಡಿ ಗ್ರಾಮದ ಬಳಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಜಾಲವೊಂದನ್ನು ಭೇದಿಸಿರುವ ಪೊಲೀಸರು, ಒಂದು ಗಂಡು ಕರುವನ್ನು ರಕ್ಷಿಸಿದ್ದಾರೆ. ಪೊಲೀಸರನ್ನು ಕಂಡು ತಲವಾರು ಹಾಗೂ ವಾಹನವನ್ನು ಸ್ಥಳದಲ್ಲೇ ಬಿಟ್ಟು ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಬುಧವಾರ (ಮಾರ್ಚ್ 25) ಬೆಳಿಗ್ಗೆ 6.30ರ ಸುಮಾರಿಗೆ ಪಿ.ಎಸ್.ಐ ಕೃಷ್ಣಪ್ಪ ಮತ್ತು ಸಿಬ್ಬಂದಿ ಕಲ್ಲಮಂಡ್ಕೂರು ಬಳಿ ಗಸ್ತಿನಲ್ಲಿದ್ದಾಗ, ಬೊಲೆರೊ ಕಾರಿನಲ್ಲಿ ದನಗಳನ್ನು ಕಳ್ಳತನ ಮಾಡಿ ಮಾಂಸಕ್ಕಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು 6.45ಕ್ಕೆ ನಿಡ್ಡೋಡಿ ರಸ್ತೆಯಲ್ಲಿ ಹೊಂಚು ಹಾಕಿ ನಿಂತಿದ್ದರು.
ಸಮಯ ಸುಮಾರು 6.50ಕ್ಕೆ ವೇಗವಾಗಿ ಬಂದ ಬೊಲೆರೊ ಕಾರನ್ನು (ಕೆ.ಎ-36-ಎಂ-7413) ನಿಲ್ಲಿಸಲು ಸೂಚಿಸಿದಾಗ, ಚಾಲಕ ಪೊಲೀಸರ ಎಚ್ಚರಿಕೆಯನ್ನು ಲೆಕ್ಕಿಸದೆ ವಾಹನವನ್ನು ನುಗ್ಗಿಸಿಕೊಂಡು ಹೋಗಿದ್ದಾನೆ. ತಕ್ಷಣ ಇಲಾಖಾ ವಾಹನದಲ್ಲಿ ಬೆನ್ನಟ್ಟಿದ ಪೊಲೀಸರು, ನಿಡ್ಡೋಡಿಯ ಬೊಂಟಳಿಕೆ ಮದಕ ಬಸ್ ನಿಲ್ದಾಣದ ಬಳಿ ಕಾರನ್ನು ಸುತ್ತುವರಿದರು. ಈ ವೇಳೆ ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಪಕ್ಕದ ಹಾಡಿ ಪ್ರದೇಶಕ್ಕೆ ಓಡಿ ನಾಪತ್ತೆಯಾಗಿದ್ದಾರೆ.
ಕಾರಿನ ಹಿಂಬದಿ ಡಿಕ್ಕಿಯಲ್ಲಿ ಕಪ್ಪು ಬಣ್ಣದ ಗಂಡು ಕರುವನ್ನು ನೈಲಾನ್ ಹಗ್ಗದಿಂದ ಕಾಲು ಮತ್ತು ಕುತ್ತಿಗೆಯನ್ನು ಕಟ್ಟಿ ಅತ್ಯಂತ ಹಿಂಸಾತ್ಮಕವಾಗಿ ಕೂಡಿಹಾಕಲಾಗಿತ್ತು. ಚಾಲಕನ ಸೀಟಿನ ಪಕ್ಕದಲ್ಲೇ ಒಂದು ತಲವಾರು ಪತ್ತೆಯಾಗಿದೆ. ಜಾನುವಾರು ಸಾಗಾಟಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅಥವಾ ದಾಳಿ ಮಾಡಿದರೆ ಅವರಿಗೆ ಹೆದರಿಸಲು ಅಥವಾ ಹಲ್ಲೆ ನಡೆಸಲು ಈ ಮಾರಕಾಸ್ತ್ರವನ್ನು ಇಟ್ಟುಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳು ಈ ಕರುವನ್ನು ಎಲ್ಲಿಂದ ಕಳ್ಳತನ ಮಾಡಿದ್ದರು ಮತ್ತು ಯಾರಿಗೆ ಮಾರಾಟ ಮಾಡಲು ಹೊರಟಿದ್ದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.