ಮಂಗಳೂರು ವಕೀಲರ ಸಂಘದ ಈ ದಿಢೀರ್ ನಿರ್ಧಾರಕ್ಕೆ ಬೆಚ್ಚಿಬಿದ್ದ ತುಳುಚಿತ್ರರಂಗ

ಮಂಗಳೂರು ಸೆಪ್ಟೆಂಬರ್ 12: ತುಳು ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ಚಿತ್ರವಾಗಿ ಮೂಡಿ ಬರುತ್ತಿರುವ ರೂಪೇಶ್ ಶೆಟ್ಟಿ ನಿರ್ದೇಶನದ ಗಿರ್ ಗಿಟ್ ತುಳು ಚಲನಚಿತ್ರಕ್ಕೆ ಇದೀಗ ಕಂಟಕ ಎದುರಾಗಿದೆ. ಈ ಚಿತ್ರದಲ್ಲಿ ನ್ಯಾಯಾಂಗ ವ್ಯವಸ್ಥೆ, ನ್ಯಾಯಾಧೀಶ ಹಾಗೂ ವಕೀಲರನ್ನು ಅವಹೇಳನ ರೀತಿಯಲ್ಲಿ ನಿಂದಿಸಲಾಗಿದೆ ಎನ್ನುವ ಆರೋಪ ಎದುರಾಗಿದೆ. ಈ ಹಿನ್ನಲೆಯಲ್ಲಿ ಚಿತ್ರದ ವಿರುದ್ಧ ಮಂಗಳೂರು ವಕೀಲರ ಸಂಘ ನ್ಯಾಯಾಂಗ ಮೆಟ್ಟಲೇರಿದ್ದು, ನ್ಯಾಯಾಲಯ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಿದೆ.

ಮಂಗಳೂರು ವಕೀಲರ ಸಂಘದ ಈ ದಿಢೀರ್ ನಿರ್ಧಾರಕ್ಕೆ ತುಳು ಚಿತ್ರರಂಗ ಬೆಚ್ಚಿ ಬಿದ್ದಿದೆ. ಗಿರ್ ಗಿಟ್ ಚಲನಚಿತ್ರ ಆಗಸ್ಟ್ 23 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ಇದೀಗ ಚಿತ್ರ ಪ್ರದರ್ಶನಗೊಂಡು ಎರಡು ವಾರಗಳೇ ಕಳೆದಿವೆ.

ಗಿರ್ ಗಿಟ್ ಚಿತ್ರ ಇತ್ತೀಚಿನ ದಿನಗಳಲ್ಲಿ ತುಳು ಚಲನಚಿತ್ರ ರಂಗದಲ್ಲಿ ಯಶಸ್ವಿಯಾಗಿ ಮೂಡಿ ಬಂದ ಚಿತ್ರ ಎನ್ನುವ ಹೆಗ್ಗಳಿಕೆಯನ್ನು ಗಳಿಸಿತ್ತು. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಚಿತ್ರ ವೀಕ್ಷಿಸಲು ಮುಗಿ ಬೀಳುತ್ತಿದ್ದರು. ಆದರೆ ಮಂಗಳೂರು ವಕೀಲರ ಸಂಘದ ಈ ನಿರ್ಧಾರ ತುಳು ಚಲನಚಿತ್ರ ರಂಗದ ಕೆಲವರಿಗೆ ಖೇಧ ಉಂಟು ಮಾಡಿದ್ದರೆ, ಇನ್ನು ಕೆಲವರು ಒಳಗೊಳಗೇ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದಲ್ಲಿ ಹಲವು ಆಕ್ಷೇಪಾರ್ಹ ರೀತಿಯ ಸಂಭಾಷಣೆಗಳಿರುವುದನ್ನು ಒಪ್ಪಿಕೊಳ್ಳಲಾಗಿದ್ದು, ವಕೀಲರ ಸಂಘದ ಜೊತೆಗೆ ಮಾತುಕತೆ ನಡೆಸಿ ಪ್ರಕರಣವನ್ನು ತಣ್ಣಗಾಗಿಸುವ ಪ್ರಯತ್ನಗಳು ನಡೆಯಲಾರಂಭಿಸಿದೆ.

ಈ ನಡುವೆ ಮಂಗಳೂರು ವಕೀಲರ ಸಂಘದ ಯಾವುದೇ ವಕೀಲರು ಈ ಪ್ರಕರಣದಲ್ಲಿ ಚಿತ್ರ ತಂಡದ ಪರ ವಕಾಲತು ನಡೆಸಲು ಹಿಂದೇಟು ಹಾಕಿವೆ. ಈ ಕಾರಣಕ್ಕಾಗಿ ಇತರ ಜಿಲ್ಲೆಗಳಿಂದ ವಕೀಲರನ್ನು ಕರೆಸಿ ವಾದ ಮಂಡಿಸಬೇಕಾದ ಅನಿವಾರ್ಯತೆಯನ್ನೂ ಸೃಷ್ಟಿಸಲಾಗಿದೆ. ಚಿತ್ರವು ದಿನದಿಂದ ದಿನಕ್ಕೆ ಜನಪ್ರೀಯಗೊಳ್ಳುತ್ತಿರುವುದನ್ನು ಸಹಿಸದ ಕೆಲವು ತುಳು ನಿರ್ಮಾಪಕರೇ ಈ ಚಿತ್ರದ ವಿರುದ್ಧ ಷಡ್ಯಂತ್ರ ನಡೆಸಿರಬಹುದು ಎನ್ನುವ ಮಾತುಗಳೂ ಈ ನಡುವೆ ಕೇಳಿ ಬರಲಾರಂಭಿಸಿದೆ.

Facebook Comments

comments