ಬೆಂಗಳೂರು ಫೆಬ್ರವರಿ 16: ತನ್ನ ತಂದೆ ತಾಯಿಯನ್ನು ನಿರ್ದಯವಾಗಿ ಕೊಲೆ ಮಾಡಿದ ಮಗನೇ ಕೊನೆಗೆ ಹೆತ್ತವರ ಅಂತ್ಯಕ್ರಿಯೆ ನೆರವೇರಿಸಿದ್ದಾನೆ.

ನೌಕಾಪಡೆ ನಿವೃತ್ತ ಅಧಿಕಾರಿ ನವೀನ್‌ಚಂದ್ರ ಭಟ್ ಮತ್ತು ಅವರ ಪತ್ನಿ ಡ. ಶ್ಯಾಮಲಾ ಭಟ್ ಅವರನ್ನು ಕೊಲೆಗೈದಿದ್ದ ಪುತ್ರ ರೋಹನ್ ಭಟ್, ಕೋರ್ಟ್ ಅವಕಾಶ ನೀಡಿದ ಹಿನ್ನೆಲೆಯಲ್ಲಿ ವಿಲ್ಸನ್‌ಗಾರ್ಡನ್ ಚಿತಾಗಾರದಲ್ಲಿ ಪೊಲೀಸರ ಸಮ್ಮುಖದಲ್ಲಿ ಇಂದು (ಫೆಬ್ರವರಿ 14) ಪೋಷಕರ ಅಂತ್ಯಕ್ರಿಯೆ ನೆರವೇರಿಸಿದ್ದಾನೆ.
ಕಳೆದ ಬುಧವಾರ ಫೆಬ್ರವರಿ 11ರಂದು ಬೆಂಗಳೂರಿನ ಎಚ್‌ಎಎಲ್ ಬಳಿಯ ವಿಜ್ಞಾನ ನಗರದಲ್ಲಿ, ಮಗನಿಂದಲೇ ಆತನ ತಂದೆ-ತಾಯಿಯ ಹತ್ಯೆ ನಡೆದಿತ್ತು. ನಾಲ್ಕು ಲಕ್ಷ ರೂ. ಹಣಕಾಸಿನ ವಿಚಾರಕ್ಕೆ ರೋಹನ್ ಭಟ್ (33) ಎಂಬಾತ ತನ್ನ ಪೋಷಕರಾದ ನೌಕಾಪಡೆ ನಿವೃತ್ತ ಅಧಿಕಾರಿ ನವೀನ್‌ಚಂದ್ರ ಭಟ್ ಮತ್ತು ತಾಯಿ ಡಾ. ಶ್ಯಾಮಲಾ ಭಟ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದ ನವೀನ್‌ಚಂದ್ರ ಭಟ್ (60) ಭಾರತೀಯ ನೌಕಾಪಡೆಯಿಂದ ಕ್ಯಾಪ್ಟನ್ ಆಗಿ ಕೇವಲ ಆರು ವರ್ಷಗಳ ಹಿಂದಷ್ಟೇ ನಿವೃತ್ತಿ ಹೊಂದಿದ್ದರು. ಅವರ ಪತ್ನಿ ಡಾ. ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದರು.
ರೋಹನ್ ಭಟ್ ಮಾನಸಿಕ ಅಸ್ವಸ್ಥನಾಗಿದ್ದ ಕಾರಣ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆರೋಪಿಯ ಸಹೋದರಿ ಅಮೆರಿಕದಿಂದ ಅಂತ್ಯಕ್ರಿಯೆಗೆ ಬಂದಿದ್ದರು. ಆಗ ಆಕೆ, ತನ್ನ ತಂದೆ-ತಾಯಿಯ ಅಂತಿಮ ವಿಧಿವಿಧಾನಗಳನ್ನು ಸಹೋದರ ರೋಹನ್ ನೆರವೇರಿಸಬೇಕು. ಇದು ನಮ್ಮ ಪೋಷಕರ ಇಚ್ಛೆಯಾಗಿತ್ತು ಎಂದು ಪೊಲೀಸರಿಗೆ ತಿಳಿಸಿದ್ದರು. ಜೊತೆಗೆ, ನ್ಯಾಯಾಲಯಕ್ಕೂ ಮನವಿ ಮಾಡಿದ್ದರು. ಈ ಮನವಿಗೆ ಕೋರ್ಟ್ ಸಹ ಸ್ಪಂದಿಸಿದ್ದು, ಹಂತಕ ರೋಹನ್ ಗೆ ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡಿದೆ.
ನ್ಯಾಯಾಲಯದ ಅನುಮತಿ ಮೇರೆಗೆ ಎಚ್‌ಎಎಲ್ ಪೊಲೀಸರು ಅಂತ್ಯಕ್ರಿಯೆಗೆ ರೋಹನ್ ಭಟ್‌ನನ್ನು ಕರೆಸಿದ್ದರು. ಆರೋಪಿ ರೋಹನ್ ಭಟ್, ವಿಲ್ಸನ್‌ಗಾರ್ಡನ್ ಚಿತಾಗಾರದಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದ. ಬಳಿಕ ಪೊಲೀಸರು ಆರೋಪಿಯನ್ನು ಕರೆದೊಯ್ದರು.



