ನವದೆಹಲಿ ಎಪ್ರಿಲ್ 09: ಧಾರ್ಮಿಕ ಆಚರಣೆಗಳು ಅಥವಾ ಮೂಢನಂಬಿಕೆಗಳು ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಮತ್ತು ನೈತಿಕತೆಗೆ ಧಕ್ಕೆ ತಂದರೆ ಅವುಗಳನ್ನು ರದ್ದುಗೊಳಿಸುವ ಅಧಿಕಾರ ನ್ಯಾಯಾಂಗಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ.

ಶಬರಿಮಲೆ ತೀರ್ಪಿನ ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಈ ಮಹತ್ವದ ಅವಲೋಕನ ಮಾಡಿದೆ. ಈ ಮೂಲಕ ಧಾರ್ಮಿಕ ನಂಬಿಕೆಗಳ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು ಎಂಬ ಕೇಂದ್ರ ಸರ್ಕಾರದ ವಾದವನ್ನು ಪೀಠವು ತಳ್ಳಿಹಾಕಿದೆ. ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಧಾರ್ಮಿಕ ಆಚರಣೆಯು ಒಂದು ವೇಳೆ ಮೂಢನಂಬಿಕೆಯಾಗಿದ್ದರೂ ಅದನ್ನು ನಿರ್ಧರಿಸುವ ಹಕ್ಕು ನ್ಯಾಯಾಲಯಕ್ಕಿಲ್ಲ. ಸಂವಿಧಾನದ 25(2)(b) ವಿಧಿಯ ಅಡಿಯಲ್ಲಿ ಶಾಸಕಾಂಗವು ಮಾತ್ರ ಇಂತಹ ವಿಷಯಗಳಲ್ಲಿ ಸುಧಾರಣಾ ಕಾನೂನು ತರಲು ಸಾಧ್ಯ. ಅಗತ್ಯ ಧಾರ್ಮಿಕ ಆಚರಣೆಗಳನ್ನು ನಿರ್ಧರಿಸಲು ‘ಸಾಂವಿಧಾನಿಕ ನೈತಿಕತೆ’ಯನ್ನು ಆಧಾರವಾಗಿ ಬಳಸಬಾರದು” ಎಂದು ವಾದಿಸಿದರು.
ಕೇಂದ್ರದ ವಾದವನ್ನು ಒಪ್ಪದ ನ್ಯಾಯಪೀಠವು, “ಧಾರ್ಮಿಕ ವಿಚಾರಗಳಲ್ಲಿ ಶಾಸಕಾಂಗದ್ದೇ ಅಂತಿಮ ಮಾತು ಎಂಬ ವಾದವನ್ನು ನಾವು ಒಪ್ಪುವುದಿಲ್ಲ. ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿರುವ ಯಾವುದೇ ವಿವಾದಾತ್ಮಕ ಆಚರಣೆಗಳನ್ನು ಪರೀಕ್ಷಿಸುವುದರಿಂದ ನ್ಯಾಯಾಲಯಗಳು ಹಿಂದೆ ಸರಿಯಲು ಸಾಧ್ಯವಿಲ್ಲ” ಎಂದು ಖಡಕ್ ಆಗಿ ಹೇಳಿತು.
ವಿಚಾರಣೆ ವೇಳೆ ಪೀಠವು ಮತ್ತೊಂದು ಮಹತ್ವದ ಪ್ರಶ್ನೆಯನ್ನು ಎತ್ತಿತು. ಅಯ್ಯಪ್ಪ ಸ್ವಾಮಿಯ ಭಕ್ತರಲ್ಲದ ವ್ಯಕ್ತಿಗಳು ಅಥವಾ ಸಂಘಟನೆಗಳು ಶತಮಾನಗಳಷ್ಟು ಹಳೆಯದಾದ ದೇವಾಲಯದ ಪದ್ಧತಿಯನ್ನು ಪ್ರಶ್ನಿಸಲು ಹೇಗೆ ಸಾಧ್ಯ? ಎಂದು ಕೇಳಿತು. 2018 ರಲ್ಲಿ ‘ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್’ ಸಲ್ಲಿಸಿದ ಅರ್ಜಿಯ ಮೇರೆಗೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.