ಚೀನಾ ,ಮಾರ್ಚ್ 24: ಪ್ರಾಣಿಗಳ ನಿಷ್ಠೆ ಮತ್ತು ಅದ್ಭುತ ನೆನಪಿನ ಶಕ್ತಿಗೆ ಸಾಕ್ಷಿಯಾದ ಅಪರೂಪದ ಘಟನೆಯೊಂದು ಚೀನಾದಲ್ಲಿ ನಡೆದಿದೆ. ಮಾಂಸದ ಅಂಗಡಿಗೆ ಬಲಿಯಾಗಬೇಕಿದ್ದ ಏಳು ಸಾಕು ನಾಯಿಗಳು, ಕಟುಕರಿಂದ ತಪ್ಪಿಸಿಕೊಂಡು ಬರೋಬ್ಬರಿ 17 ಕಿಲೋಮೀಟರ್ ದೂರ ಕ್ರಮಿಸಿ, ಸುರಕ್ಷಿತವಾಗಿ ತಮ್ಮ ಮಾಲೀಕರನ್ನು ಸೇರುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿವೆ.

ವರದಿಗಳ ಪ್ರಕಾರ, ಕೆಲವು ಕಿಡಿಗೇಡಿಗಳು ಲಾಭದ ಆಸೆಗಾಗಿ ವಿವಿಧ ಮನೆಗಳಿಂದ ಸಾಕು ನಾಯಿಗಳನ್ನು ಕದ್ದಿದ್ದರು. ಇವುಗಳನ್ನು ನಾಯಿ ಮಾಂಸದ ಅಂಗಡಿಗೆ ಮಾರಾಟ ಮಾಡುವ ಉದ್ದೇಶದಿಂದ ಟ್ರಕ್ ಒಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಆದರೆ, ಸಾಗಾಣಿಕೆಯ ಹಾದಿಯಲ್ಲಿ ಈ ನಾಯಿಗಳು ಅತ್ಯಂತ ಜಾಣ್ಮೆಯಿಂದ ಟ್ರಕ್ನಿಂದ ಕೆಳಕ್ಕೆ ಜಿಗಿದು, ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿವೆ.
ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರೈವರ್ ಮತ್ತು ಕಾರ್ಗಿ ಸೇರಿದಂತೆ ವಿವಿಧ ತಳಿಯ ಈ ಏಳು ನಾಯಿಗಳು ‘ಚಾಂಗ್ಶುವಾಂಗ್ ಎಕ್ಸ್ಪ್ರೆಸ್ವೇ’ (Changshuang Expressway) ರಸ್ತೆಯಲ್ಲಿ ಗುಂಪಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಹಾಗೂ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಅಪರಿಚಿತ ದಾರಿಯಲ್ಲಿ ಆಹಾರ ಮತ್ತು ನೀರಿಲ್ಲದೆ ಸತತ ಎರಡು ದಿನಗಳ ಕಾಲ ಈ ನಾಯಿಗಳು ಪಯಣ ಬೆಳೆಸಿದ್ದವು.
ತಮ್ಮ ಮೂಲ ಸ್ಥಳದಿಂದ ಬಹಳ ದೂರವಿದ್ದರೂ ಸಹ, ಈ ನಾಯಿಗಳು ದಾರಿ ತಪ್ಪದೆ ಸುಮಾರು 17 ಕಿಲೋಮೀಟರ್ ಕ್ರಮಿಸಿವೆ. ಮಾಲೀಕರ ಮೇಲಿನ ನಿಷ್ಠೆ ಮತ್ತು ಮನೆಗೆ ಮರಳುವ ಛಲದಿಂದ ಮಾರ್ಚ್ 19 ರಂದು ಈ ಎಲ್ಲಾ ನಾಯಿಗಳು ಸುರಕ್ಷಿತವಾಗಿ ತಮ್ಮ ಮನೆಗಳನ್ನು ತಲುಪಿವೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಶ್ವಾನಗಳ ಸಾಹಸಗಾಥೆ ಸಖತ್ ವೈರಲ್ ಆಗುತ್ತಿದ್ದು, ಪ್ರಾಣಿಗಳ ಅಕ್ರಮ ಸಾಗಾಣಿಕೆ ಮತ್ತು ಕ್ರೌರ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.