ಉಡುಪಿ ಡಿಸೆಂಬರ್ 16: ಕೋರ್ಟ್ ಆದೇಶ ಪಾಲಿಸಲು ಮುಂಜಾನೆ ನಾಲ್ಕು ಗಂಟೆಗೆ ಯುವತಿಯ ಮನೆಗೆ ನುಗ್ಗಿದ ಪೊಲೀಸರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಪೊಲೀಸರ ವಿರುದ್ದ ಇದೀಗ ಬಿಲ್ಲವ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟಕ್ಕೆ ಮುಂದಾಗಿದ್ದಾರೆ.

2014ರಲ್ಲಿ ದೇವೇಂದ್ರ ಸುವರ್ಣ ಎಂಬವರಿಗೆ ಆಶಿಕ್ ಎಂಬ ಯುವಕ ಬೈಕ್ ಅಪಘಾತ ಮಾಡಿದ್ದ, ಇದರಿಂದ ಅವರಿಗೆ ಗಂಭೀರ ಗಾಯಗಳಾಗಿದ್ದು, ಇಂದಿಗೂ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆಶಿಕ್​​​ಗೆ 25 ಲಕ್ಷ ಪರಿಹಾರವನ್ನು ನೀಡಬೇಕು ಎಂದು ಆದೇಶ ನೀಡಿತ್ತು. ಆದರೆ ಆಶಿಕ್ ಪರಿಹಾರ ನೀಡದೆ ತಲೆಮರೆಸಿಕೊಂಡಿದ್ದ ಎಂದು ಹೇಳಲಾಗಿತ್ತು. ಆಶಿಕ್​​ಗಾಗಿ ಪೊಲೀಸರು ಹಲವಾರು ಬಾರಿ ಹುಡುಕಾಟ ನಡೆಸಿದ್ದರು. ಆತ ಉಪ್ಪೂರಿನಲ್ಲಿರುವ ಅಜ್ಜಿಯ ಮನೆಯಲ್ಲಿ ಇದ್ದಾನೆ ಎಂಬ ಲೊಕೇಶನ್ ಆಧಾರದಲ್ಲಿ ಪೊಲೀಸರು ಮುಂಜಾನೆ 4:00 ಗಂಟೆ ವೇಳೆ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ಷತಾ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.


ಪೊಲೀಸರು ಹೇಳುವ ಪ್ರಕಾರ ನ್ಯಾಯಾಲಯದ ಆದೇಶದಂತೆ ಕೆಲಸ ಮಾಡಿದ್ದೇವೆ. ಕಾನೂನು ಪ್ರಕಾರ ಏನು ಮಾಡಬೇಕು ಅದನ್ನು ನಾವು ಮಾಡಿದ್ದೇವೆ. ಜತೆಗೆ ನ್ಯಾಯಾಲಯ ಹೇಳಿದಂತೆ ಆಶಿಕ್​​ ಮನೆಗೆ ದಾಳಿ ಮಾಡುವ ವೇಳೆ ನಮ್ಮ ಜತೆಗೆ ಕೋರ್ಟ್ ಅಮೀನ್ (ನ್ಯಾಯಾಲಯದಿಂದ ನೇಮಿಸಲ್ಪಟ್ಟ ಅಧಿಕಾರಿ) ಕೂಡ ಇದ್ದರು ಎಂದು ಹೇಳಿದ್ದಾರೆ. ಇನ್ನು ಈ ದಾಳಿಯ ವೇಳೆ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಆಶಿಕ್ ನ ಸಹೋದರ ಸಂಬಂಧಿ ಅಕ್ಷತಾ ಪೂಜಾರಿ ಆರೋಪಿಸುತ್ತಿದ್ದಾರೆ. ಪೊಲೀಸರು ದಾಳಿಯ ವೇಳೆ ಅವರ ಜತೆಗೆ ಕೋರ್ಟ್ ಅಮೀನ್ ಇರಲಿಲ್ಲ. ಇನ್ನು ಅವರ ಜತೆಗೆ ಒಬ್ಬ ಮಹಿಳಾ ಪೊಲೀಸ್ ಕೂಡ​​ ಇರಲಿಲ್ಲ ಎಂದು ಅಕ್ಷತಾ ಹೇಳಿದ್ದಾರೆ. ಸದ್ಯಕ್ಕೆ ಆಕೆಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬ್ರಹ್ಮಾವರದ ವಿದ್ಯಾರ್ಥಿನಿ ಕುಮಾರಿ ಅಕ್ಷತಾ ಪೂಜಾರಿಯವರ ಪ್ರಕರಣದಲ್ಲಿ ಸ್ಥಳೀಯ ಪೊಲೀಸ ಅಧಿಕಾರಿಗಳು ತಪ್ಪು ನಿರ್ಧಾರ ತೆಗೆದುಕೊಂಡಿದ್ದು, ಸಮಾಜದಲ್ಲಿ ಗೊಂದಲ ಸೃಷ್ಟಿಯಾಗಿದೆ. ಆರೋಪಿಯನ್ನು ಬಂಧಿಸುವ ಹೆಸರಲ್ಲಿ ಬಡ ತಾಯಿ ಮತ್ತು ಮಗಳ ಮೇಲೆ ಪ್ರಕರಣ ದಾಖಲು ಮಾಡಿದ್ದು, ದುರ್ಬಲ ಕುಟುಂಬಕ್ಕೆ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ವಿದ್ಯಾರ್ಥಿನಿ ಅಕ್ಷತಾ ಪೂಜಾರಿ ಮತ್ತು ಅವರ ತಾಯಿಯ ಮೇಲೆ ದಾಖಲಾದ ಪ್ರಕರಣ ತಕ್ಷಣ ರದ್ದುಪಡಿಸಿ, ನಡುರಾತ್ರಿ ಕುಟುಂಬಕ್ಕೆ ಹಿಂಸೆ ನೀಡಿದ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ..

ಉಡುಪಿ ಅಕ್ಷತಾ ಪೂಜಾರಿ ಹಲ್ಲೆ ಆರೋಪ, ಲೋಪ ಕಂಡುಬಂದಲ್ಲಿ ತಪ್ಪಿತಸ್ಥ ಪೊಲೀಸರ ವಿರುದ್ಧ ಶಿಸ್ತು ಕ್ರಮ : ಉಡುಪಿ ಎಸ್ಪಿ ಭರವಸೆ

 

Share Information