“ಆಟಿಡೊಂಜಿ ದಿನ” ಸಿನೆಮಾದ ವಿವಾದಾತ್ಮಕ ಸಂಭಾಷಣೆಯ ವಿರುದ್ದ ಆಕ್ರೋಶ

ಮಂಗಳೂರು ಡಿಸೆಂಬರ್ 3: ಡಿಸೆಂಬರ್ 6 ರಂದು ರಾಜ್ಯದಾದ್ಯಂತ ರಿಲೀಸ್ ಆಗಲಿರುವ ತುಳು ಚಿತ್ರವೊಂದರ ಟ್ರೈಲರ್ ಇದೀಗ ಭಾರೀ ವಿವಾದ ಸೃಷ್ಟಿಸಿದೆ. ಈ ಟ್ರೈಲರ್ ನಲ್ಲಿ ಯುವತಿಯೊಬ್ಬಳನ್ನು ತಂಡವೊಂದು ಹಿಂಬಾಲಿಸಿಕೊಂಡು ಹೋಗುವ ದೃಶ್ಯವಿದ್ದು, ಈ ದೃಶ್ಯಕ್ಕೆ ನೀಡಲಾಗಿರುವ ಹಿನ್ನಲೆ ಸಂಭಾಷಣೆಯಲ್ಲಿ ಬಯಲು ಸೀಮೆಯ ಜನರನ್ನು ಹೀಯಾಳಿಸುವ ವಿಚಾರ ಬಂದಿದೆ.

ತುಳು ಭಾಷೆಯಲ್ಲಿರುವ ಈ ಸಂಭಾಷಣೆಯಲ್ಲಿ ಹುಡುಗಿಯೋರ್ವಳನ್ನು ಅತ್ಯಾಚಾರ ನಡೆಸುವ ಯತ್ನಕ್ಕೆ ಕೈ ಹಾಕಿದಲ್ಲಿ ಸುಮ್ಮನೆ ಕುಳಿತುಕೊಳ್ಳಲು ತುಳುನಾಡಿನ ಜನ ಬಯಲು ಸೀಮೆಯ( ಗಟ್ಟದ) ಜನರಂತಲ್ಲ ಎಂದಿದೆ. ಈ ಸಂಭಾಷಣೆ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಬಯಲು ಸೀಮೆಯ ಜನರನ್ನು ಹೀಯಾಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭವಿಷ್. ಆರ್.ಕೆ ಕ್ರಿಯೇಷನ್ಸ್ ನ “ಆಟಿಡೊಂಜಿ ದಿನ” ಎನ್ನುವ ಚಿತ್ರದ ಟ್ರೈಲರ್ ಇದಾಗಿದ್ದು, ಪ್ರಥ್ವಿ ಅಂಬಾರ್ ಸೇರಿದಂತೆ ಹಲವು ತುಳು ಚಿತ್ರ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ. ಗಿರಿಗಿಟ್ ಎನ್ನುವ ತುಳು ಚಿತ್ರದಲ್ಲಿ ವಕೀಲರನ್ನು ಹೀಯಾಳಿಸಲಾಗಿದೆ ಎನ್ನುವ ಕಾರಣಕ್ಕೆ ಚಿತ್ರಕ್ಕೆ ತಡೆಯೊಡ್ಡಿದ್ದ ವಕೀಲರ ಸಂಘ ಬಳಿಕ ಮಾತುಕತೆಯ ಮೂಲಕ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿತ್ತು.

ಇದೀಗ ಡಿಸೆಂಬರ್ 6 ರಂದು ತೆರೆ ಕಾಣಲಿರುವ ಆಟಿಡೊಂಜಿ ದಿನ ಚಿತ್ರ ತೆರೆ ಕಾಣುವ ಮೊದಲೇ ಹೊಸತೊಂದು ಕಾಂಟ್ರಾವರ್ಸಿಯನ್ನು ಹೆಗಲ ಮೇಲೆ ಹಾಕಿಕೊಂಡಿದೆ.