ಇತ್ತೀಚೆಗೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧವನ್ನು ನೆಪವಾಗಿಟ್ಟುಕೊಂಡು ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ತೈಲ ಉತ್ಪನ್ನಗಳ ಬೆಲೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಜೊತೆಗೆ, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದ ಅಡುಗೆ ಅನಿಲ ಸಿಲಿಂಡರ್ಗಳ ಸಂಖ್ಯೆಯನ್ನು ಕಳೆದ ವರ್ಷಕ್ಕಿಂತ ಕಡಿತಗೊಳಿಸಿ ಕೇವಲ ನಾಲ್ಕಕ್ಕೆ ಸೀಮಿತಗೊಳಿಸಿರುವುದು ಜನಸಾಮಾನ್ಯರ ಮೇಲೆ ಮತ್ತೊಂದು ಆರ್ಥಿಕ ಹೊರೆ ಹೊರಿಸಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಂ ಗುರುವಾಯನಕೆರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ನಿರುದ್ಯೋಗದ ಸಮಸ್ಯೆಯಿಂದ ಕಂಗೆಟ್ಟಿರುವ ಕಾರ್ಮಿಕ ಕುಟುಂಬಗಳು ತೈಲ ಬೆಲೆ ಏರಿಕೆ ಮತ್ತು ಅಡುಗೆ ಅನಿಲ ದರ ಹೆಚ್ಚಳದಿಂದ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿವೆ. ಮಹಿಳೆಯರು ಮತ್ತು ಬಡ ಕುಟುಂಬಗಳ ಕಲ್ಯಾಣದ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಉಜ್ವಲ ಯೋಜನೆಯ ಸಬ್ಸಿಡಿಯನ್ನು ಕಡಿತಗೊಳಿಸಿರುವುದು ಕೇಂದ್ರ ಸರ್ಕಾರದ ಜನವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಅವರು ಹೇಳಿದ್ದಾರೆ.
ಯುದ್ಧಗಳು ವಿಶ್ವದ ಯಾವುದೇ ಭಾಗದಲ್ಲಿ ನಡೆದರೂ ಅದರ ಹೊರೆ ದೇಶದ ಜನಸಾಮಾನ್ಯರ ಮೇಲೆ ಬೀಳದಂತೆ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ. ಆದ್ದರಿಂದ ಅಡುಗೆ ಅನಿಲ ದರವನ್ನು ತಕ್ಷಣವೇ ಹಿಂದಿನ ಮಟ್ಟಕ್ಕೆ ಇಳಿಸಬೇಕು ಹಾಗೂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದ ಸಬ್ಸಿಡಿಯನ್ನು ಮರುಸ್ಥಾಪಿಸಬೇಕು ಎಂದು SDTU ಆಗ್ರಹಿಸಿದೆ.
ಕೇಂದ್ರ ಸರ್ಕಾರದ ಈ ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರಾಜ್ಯಾದ್ಯಂತ ಕಾರ್ಮಿಕರು, ಮಹಿಳೆಯರು, ಬಡ ಹಾಗೂ ಮಧ್ಯಮ ವರ್ಗದ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು SDTU ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಂ ಗುರುವಾಯನಕೆರೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.