ಜಿಲ್ಲೆಯಲ್ಲಿ ಮುಂದುವರೆದ ಧಾರಾಕಾರ ಮಳೆ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಮಂಗಳೂರು ಜುಲೈ 22: ಕರಾವಳಿಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಮುಂಜಾನೆಯಿಂದಲೇ ಪ್ರಾರಂಭವಾದ ಮಳೆ ಸಂಜೆಯವರೆಗೂ ಮುಂದುವರೆದಿದೆ. ಬೆಳಿಗ್ಗೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಜಾನೆಯಿಂದ ಭಾರೀ ಮಳೆ ಸುರಿಯುತ್ತಿದೆ. ಉಡುಪಿಯಲ್ಲಿ ಕಳೆದ 24 ಗಂಟೆಯಲ್ಲಿ 60 ಮಿಲಿಮೀಟರ್ ಮಳೆ ದಾಖಲಾಗಿದ್ದು, ನಾಲ್ಕನೇ ದಿನವು ನಿರಂತರ ವರ್ಷಧಾರೆ ಆಗುತ್ತಿದೆ. ಜಿಲ್ಲೆಯ ಕುಂದಾಪುರ, ಕಾರ್ಕಳದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕಾರ್ಮೋಡ ಮುಂದುವರಿದಿದ್ದು ಮಳೆ ಮುಂದುವರೆಯುವ ಸಾಧ್ಯತೆ ಇದೆ.

ಮಂಗಳೂರು, ಕಾಸರಗೋಡು ತೀರ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಒಳಭಾಗದಲ್ಲಿ ಮಳೆ ಕಡಿಮೆಯಾಗಿದೆ. ಮಂಗಳೂರಿನ ಅತ್ತಾವರ, ಕೊಡಿಯಾಲ್ ಬೈಲಿನ ಎಂ.ಜಿ ರಸ್ತೆಯ ಬಳಿ ಮಳೆ ನೀರು ಹರಿಯಲಾಗದೆ ರಸ್ತೆಯಲ್ಲಿ ತುಂಬಿಕೊಂಡಿದೆ.
ಮಧ್ಯಾಹ್ನ ಒಂದೂವರೆ ಗಂಟೆ ಕಾಲ ಸುರಿದ ಮಳೆಯಿಂದಾಗಿ ನಗರದ ಜನ ಹೈರಾಣಾಗಿದ್ದಾರೆ. ಯಾವಾಗಲೂ ಆಷಾಢ ಮಳೆ ಸಾಮಾನ್ಯವಾಗಿ ಸುರಿಯುತಿತ್ತು. ಆದರೆ ಈ ಬಾರಿ ಮಳೆಯೇ ಆಗದೆ ಜನ ಬಸವಳಿದಿದ್ದರು. ಇದೀಗ ಒಂದೇ ಸಮನೆ ಮಳೆಯಾಗಿದೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ.ಅಲ್ಲದೆ ದಕ್ಷಿಣಕನ್ನಡ ಜಿಲ್ಲೆಯ ಅಂಬ್ಲಮೊಗರುವಿನ ಮದಕ ಗುಡ್ಡೆಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಎರಡು ಮನೆಗೆ ಹಾನಿಯಾಗಿದೆ.

ಅಬ್ಬಾಸ್ ಮತ್ತು ರಝಾಕ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಬಾರಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತಕ್ಕೆ ಸ್ಥಳದಲ್ಲೇ ಇದ್ದ ವಿದ್ಯುತ್ ಕಂಬ ಧರೆಗುಳಿದಿದ್ದು, ಮನೆಯವರ ಸಮಯ ಪ್ರಜ್ನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಮೆಸ್ಕಾಂ ಸಿಬ್ಬಂದಿಗಳು ಘಟನೆ ನಡೆದ ಸ್ಥಳಕ್ಕೆ ತೆರಳಿದ್ದು, ವಿದ್ಯುತ್ ಕಂಬ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

VIDEO

Facebook Comments

comments