Connect with us

LATEST NEWS

ಬಂಟ್ಸ್ ಹಾಸ್ಟೇಲ್ ನಲ್ಲಿ ಸಾರ್ವಜನಿಕರಿಗೆ ಉಚಿತ ಅನಾರೋಗ್ಯ ಭಾಗ್ಯ

ಬಂಟ್ಸ್ ಹಾಸ್ಟೇಲ್ ನಲ್ಲಿ ಸಾರ್ವಜನಿಕರಿಗೆ ಉಚಿತ ಅನಾರೋಗ್ಯ ಭಾಗ್ಯ

ಮಂಗಳೂರು ಜೂನ್ 1: ಬಂಟ್ಸ್ ಹಾಸ್ಟೇಲ್ ಪ್ರದೇಶದಲ್ಲಿ ಹಾದು ಹೋಗುವ ಹಾಗೂ ನೆಲೆಸಿರುವ ಸಾರ್ವಜನಿಕರಿಗೆ ಉಚಿತವಾಗಿ ಅನಾರೋಗ್ಯ‌ ಭಾಗ್ಯ ನೀಡುವ ಕಾಮಗಾರಿಗಳು ಇತ್ತೀಚಿನ ಕೆಲವು ದಿನಗಳಿಂದ ಅತ್ಯಂತ ವೇಗವಾಗಿ ನಡೆಯುತ್ತಿದೆ.

ಬಂಟ್ಸ್ ಹಾಸ್ಟೆಲ್ ನಲ್ಲಿರುವ ಹಳೆಯ ಲಿಯೋ ಫರ್ನಿಚರ್ ಜಾಗದಲ್ಲಿ ಹೊಸ ಕಟ್ಟಡದ ಕಾಮಗಾರಿ, ಉದ್ಯಮಿ ಎ.ಜೆ.ಶೆಟ್ಟಿಗೆ ಸೇರಿದ ಜಮೀನಿನಲ್ಲಿ ನಡೆಯುತ್ತಿರುವ ಕಾಮಗಾರಿ‌ ಹಾಗೂ ಅದರ‌ ಮುಂಭಾಗದಲ್ಲಿ ನಡೆಯುತ್ತಿರುವ ಹಳೆ ಕಟ್ಟಡ ಒಡೆಯುವ ಕಾಮಗಾರಿಗಳು ಇದೀಗ ಸಾರ್ವಜನಿಕರ ನಿದ್ದೆಗೆಡಿಸಿದೆ.

ಮೂರು ಕಟ್ಟಡಗಳ ಕಾಮಗಾರಿಯ ನೆಪದಲ್ಲಿ ಒಂದೆಡೆ ಭೂಮಿಯೊಡೆಯುವ ಕಾಮಗಾರಿ‌ ನಡೆಯುತ್ತಿದ್ದು, ಇಡೀ ಪ್ರದೇಶವೇ ಅಲುಗಾಡಲಾರಂಭಿಸಿದೆ. ಭೂಮಿಯ ಮೇಲೆ ಭಾರೀ ಪ್ರಮಾಣದ ಫೈಲಿಂಗ್ ಕಾಮಗಾರಿಯಿಂದಾಗಿ ಕಾಮಗಾರಿ ನಡೆಯುತ್ತಿರುವ ಪಕ್ಕದ ಕಟ್ಟಡಗಳು ಅಲುಗಾಡಲಾರಂಭಿಸಿದೆ.

ಇನ್ನೊಂದೆಡೆ ಹಳೆ ಕಟ್ಟಡವನ್ನು ಕೆಡಹುವ ಕಾಮಗಾರಿಯಿಂದ ಇಡೀ ಪ್ರದೇಶವೇ ಧೂಳಿನಿಂದ ಆವೃತವಾಗಿದೆ. ಕಳೆದ ಎರಡು ತಿಂಗಳಿನಿಂದ ಈ ಕಾಮಗಾರಿಗಳು‌ ನಿರಂತರವಾಗಿ ನಡೆಯುತ್ತಿದ್ದು, ಸಾರ್ವಜನಿಕರಿಗೆ ಕಿವಿ, ಕಣ್ಣು, ಮೂಗು ತೆರೆಯದಂತಹ‌ ಸ್ಥಿತಿ ನಿರ್ಮಾಣಗೊಂಡಿದೆ.
ಕಟ್ಟಡ ಕಾಮಗಾರಿಯ ಸಂದರ್ಭದಲ್ಲಿ ಅನುಸರಿಸಬೇಕಾದ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಇಲ್ಲಿ ಕಾಮಗಾರಿಗಳು ನಡೆಯುತ್ತಿದ್ದು , ಸಂಬಂಧಪಟ್ಟ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ.

ಈ ಕಾಮಗಾರಿಗಳಿಂದಾಗಿ ರಸ್ತೆಯಲ್ಲಿ ಸಾಗುವ ವಾಹನಗಳಿಗೆ, ಜನರ ಮೇಲೆ ಯಾವ ಸಂದರ್ಭದಲ್ಲಿ ಕಲ್ಲು ಬೀಳುತ್ತೋ ಅನ್ನೋದನ್ನು ಉಹಿಸಲೂ ಸಾಧ್ಯವಾಗದ ಸ್ಥಿತಿಯೀಗ ನಿರ್ಮಾಣಗೊಂಡಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸದೇ ಹೋದಲ್ಲಿ ಸಾರ್ವಜನಿಕರೇ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ಸ್ಥಳೀಯರು ನೀಡಿದ್ದಾರೆ.

VIDEO

Facebook Comments

comments