ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಹತ್ಯೆಯ ಸಂಚಿನಲ್ಲಿ ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಭಾಗಿ ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಅನಾಮಿಕ ವ್ಯಕ್ತಿಯ ಧ್ವನಿ

ಮಂಗಳೂರು ಎಪ್ರಿಲ್ 3: ಎರಡು ವಾರಗಳ ಹಿಂದೆ ಮಡಿಕೇರಿಯ ಮೇಕೇರಿ ಎಂಬಲ್ಲಿ ನಡೆದ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿಯವರ ಸಿನಿಮೀಯ ರೀತಿಯ ಹತ್ಯೆಯಲ್ಲಿ ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಸತೀಶ್ ಕುಮಾರ್ ಕೈವಾಡವಿದೆ ಎನ್ನುವ ವಾಯ್ಸ್ ರೆಕಾರ್ಡ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ.

ವಾಯ್ಸ್ ರೆಕಾರ್ಡ್ ಮಾಡಿರುವ ವ್ಯಕ್ತಿ ಬಾಲಚಂದ್ರ ಕಳಗಿ ಅವರ ಹತ್ಯೆಯ ಆರೋಪಿಗಳ ಜೊತೆ ಪೋಲೀಸ್ ಅಧಿಕಾರಿ ಸತೀಶ್ ಕುಮಾರ್ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಬಾಲಚಂದ್ರ‌ ಕಳಗಿಯವರನ್ನು ಲಾರಿ ಅಫಘಾತವಾದಂತೆ ಬಿಂಬಿಸಿ ಕೊಲೆ ಮಾಡಲಾಗಿತ್ತು.
ಈ ಸಂಬಂಧ ಹರಿಪ್ರಸಾದ್, ಸಂಪತ್ ಕುಮಾರ್ ಮತ್ತು ಜಯನ್ ಅವರನ್ನು ಬಂಧಿಸಲಾಗಿದ್ದು, ಆರೋಪಿಗಳು ಸುಳ್ಯ ಪರಿಸರದಲ್ಲಿ ಹಲವಾರು ಅಕ್ರಮ ದಂಧೆಗಳಲ್ಲಿ ತೊಡಗಿಕೊಂಡಿದ್ದರು.

ವಾಯ್ಸ್ ರೆಕಾರ್ಡ್ ನಲ್ಲಿ ಮಾತನಾಡಿರುವ ವ್ಯಕ್ತಿ ಈ ದಂಧೆಯಲ್ಲಿ ಆರೋಪಿಗಳಿಗೆ ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ಸತೀಶ್ ಕುಮಾರ್ ಜೊತೆ ಸಂಪರ್ಕ ಈ ಹಿಂದೆಯೂ ಇತ್ತು ಎಂದು ಆರೋಪಿಸಲಾಗಿದೆ.

ಬಾಲಚಂದ್ರ ಕಳಗಿಯವರ ಹತ್ಯೆಗೆ ಕೆಲವು ದಿನಗಳ ಹಿಂದೆ ಸತೀಶ್ ಕುಮಾರ್ ಹಾಗೂ ಆರೋಪಿಗಳ ನಡುವೆ ಹಲವು‌ ಬಾರಿ ಫೋನ್ ಸಂಭಾಷಣೆ ನಡೆದಿದೆ‌ ಎನ್ನುವ ಆರೋಪವನ್ನೂ ಮಾಡಲಾಗಿದೆ. ಉನ್ನತ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಪೋಲಿಸ್ ಅಧಿಕಾರಿಯ ಫೋನ್ ಸಂಭಾಷಣೆಯ ವಿವರ ಪಡೆದುಕೊಳ್ಳಬೇಕೆನ್ನುವ ಒತ್ತಾಯವನ್ನೂ ಮಾಡಲಾಗಿದೆ.

ಸತೀಶ್ ಕುಮಾರ್ ಹಾಗೂ ಆರೋಪಿಗಳಿಗೆ ಹಿಂದಿನಿಂದಲೂ ಪರಿಚಯವಿತ್ತು ಎನ್ನುವ ಮಾಹಿತಿ ಸುಳ್ಯ ಪರಿಸರದ ಜನರೂ ನೀಡಿರುವ ಹಿನ್ನಲೆಯಲ್ಲಿ ಅಧಿಕಾರಿಯನ್ನು ತನಿಖೆ ನಡೆಸಬೇಕೆನ್ನುವ ಒತ್ತಾಯವೂ ಕೇಳಿ ಬರುತ್ತಿದೆ.

ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಾಯ್ಸ್ ರೆಕಾರ್ಡ್ ಹರಡಿದವರನ್ನು ಸುಳ್ಯ ಠಾಣೆಗೆ ಕರೆಸಿ ತನಿಖೆ ನಡೆಸುವ ಪ್ರಕ್ರಿಯೆಯೂ ಆರಂಭಗೊಂಡಿದೆ.