ಚಂಡೀಗಢ,ಏಪ್ರಿಲ್ 01: ಐಪಿಎಲ್ 2026ರ ಕಾದಾಟದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಸ್ಮರಣೀಯ ಜಯ ದಾಖಲಿಸಿದೆ. ಮಂಗಳವಾರ ನಡೆದ ರೋಚಕ ಪಂದ್ಯದಲ್ಲಿ ಪದಾರ್ಪಣೆಯ ಆಟಗಾರ ಕೂಪರ್ ಕಾನಲಿ (Cooper Connolly) ಅವರ ಅಸಾಧಾರಣ ಬ್ಯಾಟಿಂಗ್ ನೆರವಿನಿಂದ ಪಂಜಾಬ್, ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್ಗಳ ಅಂತರದ ಜಯ ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಪಂಜಾಬ್ ಬೌಲರ್ಗಳು ಆರಂಭದಲ್ಲೇ ಕಡಿವಾಣ ಹಾಕಿದರು. ಅದರಲ್ಲೂ ಕರ್ನಾಟಕದ ವೇಗಿ ವಿಜಯಕುಮಾರ್ ವೈಶಾಕ್ ತಮ್ಮ ನಿಖರ ದಾಳಿಯ ಮೂಲಕ ಗುಜರಾತ್ನ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (2/28) ಮಧ್ಯಮ ಓವರ್ಗಳಲ್ಲಿ ರನ್ ವೇಗಕ್ಕೆ ಬ್ರೇಕ್ ಹಾಕಿದರು. ನಾಯಕ ಶುಭ್ಮನ್ ಗಿಲ್ (39) ಮತ್ತು ಜೋಸ್ ಬಟ್ಲರ್ (38) ಹೋರಾಟದ ಹೊರತಾಗಿಯೂ ಗುಜರಾತ್ 20 ಓವರ್ಗಳಲ್ಲಿ 162 ರನ್ಗಳ ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟುಕೊಂಡಿತು.
163 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ಗೆ ಆರಂಭಿಕ ಆಟಗಾರ ಪ್ರಭ್ಸಿಮ್ರಾನ್ ಸಿಂಗ್ (37) ಭರವಸೆ ನೀಡಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕರ್ನಾಟಕದ ಮತ್ತೊಬ್ಬ ವೇಗಿ ಪ್ರಸಿದ್ಧ ಕೃಷ್ಣ (2/30) ಸತತ ಆಘಾತ ನೀಡಿದರು. ಶ್ರೇಯಸ್ ಅಯ್ಯರ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಅವರಂತಹ ಅನುಭವಿಗಳು ಬೇಗನೆ ಪೆವಿಲಿಯನ್ ಸೇರಿದಾಗ ಪಂಜಾಬ್ ಸೋಲಿನ ಸುಳಿಗೆ ಸಿಲುಕಿತ್ತು.
ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ 22 ವರ್ಷದ ಯುವ ಆಟಗಾರ ಕೂಪರ್ ಕಾನಲಿ ಅಕ್ಷರಶಃ ಅಬ್ಬರಿಸಿದರು. ಕೇವಲ 44 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಆಕರ್ಷಕ ಸಿಕ್ಸರ್ಗಳೊಂದಿಗೆ ಅಜೇಯ 72 ರನ್ ಸಿಡಿಸಿದ ಕಾನಲಿ, ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಒತ್ತಡದ ನಡುವೆಯೂ ಶಾಂತಚಿತ್ತರಾಗಿ ಬ್ಯಾಟ್ ಬೀಸಿದ ಅವರು, ಪದಾರ್ಪಣೆಯ ಪಂದ್ಯದಲ್ಲೇ ‘ಮ್ಯಾಚ್ ವಿನ್ನರ್’ ಆಗಿ ಹೊರಹೊಮ್ಮಿದರು.
₹3 ಕೋಟಿಗೆ ಹರಾಜಾದ ಕಾನಲಿ, ಮೊದಲ ಪಂದ್ಯದಲ್ಲೇ ಪಂದ್ಯ ಪುರುಷ ಪ್ರಶಸ್ತಿ ಮುಡಿಗೇರಿಸಿಕೊಂಡರು.ಜೋಶ್ ಬಟ್ಲರ್ ಅವರ ಕ್ಯಾಚ್ ಪಡೆದ ಕ್ಸೇವಿಯರ್ ಬಾರ್ಟ್ಲೆಟ್ ಅವರ ಸಾಹಸ ಕ್ರೀಡಾಂಗಣದಲ್ಲಿ ಸಂಚಲನ ಮೂಡಿಸಿತು. ಒಂದು ಕಡೆ ವೈಶಾಕ್ ಬೌಲಿಂಗ್ ಮಿಂಚಿದರೆ, ಮತ್ತೊಂದೆಡೆ ಪ್ರಸಿದ್ಧ ಕೃಷ್ಣ ಪಂಜಾಬ್ ಬ್ಯಾಟರ್ಗಳಿಗೆ ನಡುಕ ಹುಟ್ಟಿಸಿದರು.ಅಂತಿಮವಾಗಿ 19.1 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಗುರಿ ತಲುಪಿದ ಪಂಜಾಬ್ ಕಿಂಗ್ಸ್, ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.