ಧಾರವಾಡ , ಏಪ್ರಿಲ್ 17: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ತೀರ್ಪು ಪ್ರಕಟಿಸಿದೆ. ಪ್ರಕರಣದ 15ನೇ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 16 ಮಂದಿ ಅಪರಾಧಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಈ ತೀರ್ಪಿನ ಬೆನ್ನಲ್ಲೇ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವೂ ರದ್ದಾಗಿದ್ದು, ಕೈ ಪಾಳಯಕ್ಕೆ ಭಾರಿ ಆಘಾತ ಎದುರಾಗಿದೆ.

ಕಳೆದ ಒಂದು ದಶಕದಿಂದ ನಡೆದ ಸುದೀರ್ಘ ಕಾನೂನು ಪ್ರಕ್ರಿಯೆಯ ನಂತರ ವಿಶೇಷ ನ್ಯಾಯಾಲಯವು ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಿದೆ. ವಿನಯ್ ಕುಲಕರ್ಣಿ ಮಾತ್ರವಲ್ಲದೆ, ಪ್ರಕರಣದ 19ನೇ ಆರೋಪಿ ಚನ್ನಕೇಶವ ಟಿಂಗರಿಕರ್ ಸತ್ಯ ಮರೆಮಾಚಿದ ಹಿನ್ನೆಲೆಯಲ್ಲಿ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, ಹತ್ಯೆಯಾದ ಯೋಗೀಶ್ ಗೌಡ ಅವರ ಮಕ್ಕಳಿಗೆ 16 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ಅಪರಾಧಿಗಳಿಗೆ ಕೋರ್ಟ್ ನಿರ್ದೇಶನ ನೀಡಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆಯಡಿ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯಾದ ಕಾರಣ, ವಿನಯ್ ಕುಲಕರ್ಣಿ ಅವರು ಶಾಸಕ ಸ್ಥಾನದಿಂದ ಅಧಿಕೃತವಾಗಿ ಅನರ್ಹಗೊಂಡಿದ್ದಾರೆ.
ಜೂನ್ 15, 2016ರಂದು ಧಾರವಾಡದ ಸಪ್ತಾಪುರ ಬಡಾವಣೆಯ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದ ಯೋಗೀಶ್ ಗೌಡ ಅವರನ್ನು ದುಷ್ಕರ್ಮಿಗಳು ಮಚ್ಚು ಹಾಗೂ ಲಾಂಗ್ಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸರು ಇದೊಂದು ಆಸ್ತಿ ವಿವಾದಕ್ಕಾಗಿ ನಡೆದ ಕೊಲೆ ಎಂದು ಬಿಂಬಿಸಿದ್ದರು. ಆದರೆ, ಮೃತರ ಕುಟುಂಬಸ್ಥರ ನಿರಂತರ ಹೋರಾಟದ ಫಲವಾಗಿ 2019ರಲ್ಲಿ ಈ ಪ್ರಕರಣ ಸಿಬಿಐ (CBI) ಪಾಲಾಯಿತು. ಸಿಬಿಐ ನಡೆಸಿದ ಆಳವಾದ ತನಿಖೆಯಲ್ಲಿ ಇದು ಕೇವಲ ಆಸ್ತಿ ವಿಚಾರವಲ್ಲ, ಬದಲಾಗಿ ರಾಜಕೀಯ ಪ್ರೇರಿತ ಕೊಲೆ ಎಂಬುದು ಸಾಬೀತಾಯಿತು. ಈ ಸಂಬಂಧ 2020ರ ನವೆಂಬರ್ನಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಲಾಗಿತ್ತು.
ಈ ಸಂಕೀರ್ಣ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳ ಪೈಕಿ ಎ1 ಬಸವರಾಜ ಮುತ್ತಗಿ ಮಾಫಿ ಸಾಕ್ಷಿಯಾಗಿ ನೀಡಿದ ಸಾಕ್ಷ್ಯಗಳು ಅತ್ಯಂತ ನಿರ್ಣಾಯಕವಾದವು. ಮತ್ತೊಂದೆಡೆ ಎ17 ಶಿವಾನಂದ ಅವರು ಮಾಫಿ ಸಾಕ್ಷಿಯಾದ ಬಳಿಕವೂ ಪ್ರತಿಕೂಲ ಹೇಳಿಕೆ ನೀಡಿದ್ದರಿಂದ ಅವರನ್ನು ಮತ್ತೆ ಆರೋಪಿಯನ್ನಾಗಿಸಲು ಸಿಬಿಐ ಮನವಿ ಮಾಡಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎ20 ವಾಸುದೇವ ನಿಲೇಕಣಿ ಹಾಗೂ ಎ21 ಸೋಮಶೇಖರ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಇಂದು ಶಿಕ್ಷೆ ಪ್ರಕಟವಾದ ನಂತರ ವಿನಯ್ ಕುಲಕರ್ಣಿ ಪರ ವಕೀಲರು ನ್ಯಾಯಾಲಯಕ್ಕೆ ವಿಶೇಷ ಮನವಿ ಸಲ್ಲಿಸಿ, ಶಾಸಕರು ಕಳೆದ ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿದ್ದಾರೆ, ಅವರಿಗೆ ಬಟ್ಟೆ ಬದಲಿಸಲು ಅನುಮತಿ ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಜೈಲು ಕೈಪಿಡಿಯಲ್ಲಿರುವ ನಿಯಮಗಳಂತೆ (Prison Manual) ಅಪರಾಧಿಗಳಿಗೆ ತಕ್ಷಣವೇ ಸೂಕ್ತ ಬಟ್ಟೆ ಹಾಗೂ ಸೌಲಭ್ಯ ಒದಗಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದರು.