ಪ್ರಮೋದ್ ಮಧ್ವರಾಜ್ ಜನ್ಮದಲ್ಲೇ ಪ್ರಥಮಬಾರಿಗೆ ಜೆಡಿಎಸ್ ಗೆ ವೋಟ್ ಮಾಡಲಿದ್ದಾರೆ- ರಘುಪತಿ ಭಟ್

ಉಡುಪಿ ಎಪ್ರಿಲ್ 16: ಕಾಂಗ್ರೇಸ್ ಮುಖಂಡ ಪ್ರಮೋದ್ ಮಧ್ವರಾಜ್ ಜನ್ಮದಲ್ಲೇ ಜೆಡಿಎಸ್ ಗೆ ಪ್ರಥಮ ಬಾರಿಗೆ ವೋಟ್ ಮಾಡಲಿದ್ದಾರೆ ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಲೇವಡಿ ಮಾಡಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ಪ್ರಮೋದ್ ಮಧ್ವರಾಜ್ ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್ ಮುಕ್ತ ಮಾಡಿದ್ದಾರೆ. ನೈಜ ಕಾಂಗ್ರೆಸ್ಸಿಗರು ಕೈ ಗುರುತು ಇಲ್ಲದ ಕಾರಣ ಈ ಬಾರಿ ಬಿಜೆಪಿಗೆ ಮತ ಹಾಕುತ್ತಾರೆ. ಉಡುಪಿಯ ಜನಕ್ಕೆ ಜೆಡಿಎಸ್ ಅಂದರೆ ಗೊತ್ತಿಲ್ಲ, ಇನ್ನೂ ಚಿಕ್ಕಮಗಳೂರಲ್ಲಿ ಪ್ರಮೋದ್ ಅಂದರೆ ಯಾರು ಎಂದು ಶಾಸಕ ಭಟ್ ಲೇವಡಿ ಮಾಡಿದರು.

ಪ್ರಮೋದ್ ಮಧ್ವರಾಜ್ ಹಲವು ಬಾರಿ ಪಕ್ಷ ಬಿಟ್ಟು ಬೇರೆ ಪಕ್ಷಗಳಿಗೆ ವೋಟ್ ಮಾಡಿದ್ದಾರೆ. ಹೀಗಾಗಿ ಅವರ ಮನಸಾಕ್ಷಿಯನ್ನು ಕೇಳಿಕೊಂಡರೆ ಗೊತ್ತಾಗುತ್ತದೆ. ಹಲವು ಬಾರಿ ಅವರು ಬಿಜೆಪಿಗೆ ಮತ ಹಾಕಿದ್ದಾರೆ. ಈ ಬಾರಿ ಜೆಡಿಎಸ್‍ಗೆ ಮೊದಲ ಬಾರಿಗೆ ಮತ ಹಾಕಲಿದ್ದಾರೆ ಎಂದರು.
ಉಡುಪಿ ಚಿಕ್ಕಮಗಳೂರಲ್ಲಿ ಈ ಬಾರಿ ಜೆಡಿಎಸ್ ದಾಖಲೆ ಬರೆಯಲಿದೆ. ಇತಿಹಾಸದಲ್ಲೇ ಅತೀ ಹೆಚ್ಚು ವೋಟು ಜೆಡಿಎಸ್‍ಗೆ ಬೀಳಲಿದೆ. ಇಲ್ಲದಿದ್ದರೆ ಈ ಜಿಲ್ಲೆಯಲ್ಲಿ ಜೆಡಿಎಸ್‍ಗೆ ನೆಲೆಯೇ ಇಲ್ಲ.

ಈ ಬಾರಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆ ವನ್ ಸೈಡ್ ಆಗಿದೆ. ಬಿಜೆಪಿ ಪರವಾದ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಜೆಡಿಎಸ್ ಆತ್ಮವಿಶ್ವಾಸ ಕಳೆದುಕೊಂಡಿದೆ ಎಂದು ಹೇಳಿದರು.