Connect with us

    LATEST NEWS

    ಕಾಫಿ ಕಿಂಗ್ ಸಿದ್ದಾರ್ಥ ಸಾವಿನ ತನಿಖೆ ಅಗಸ್ಟ್ 4 ರೊಳಗೆ ವರದಿ ಸಲ್ಲಿಸಲು ಮಂಗಳೂರು ಪೊಲೀಸ್ ಆಯುಕ್ತರ ಸೂಚನೆ

    ಕಾಫಿ ಕಿಂಗ್ ಸಿದ್ದಾರ್ಥ ಸಾವಿನ ತನಿಖೆ ಅಗಸ್ಟ್ 4 ರೊಳಗೆ ವರದಿ ಸಲ್ಲಿಸಲು ಮಂಗಳೂರು ಪೊಲೀಸ್ ಆಯುಕ್ತರ ಸೂಚನೆ

    ಮಂಗಳೂರು ಅಗಸ್ಟ್ 2: ಕಾಫಿ ಕಿಂಗ್, ಕಫೆ ಕಾಫಿಡೇ ಮಾಲಿಕ ಸಿದ್ದಾರ್ಥ ಅವರ ನಿಗೂಢ ಸಾವಿನ ಸಮಗ್ರ ತನಿಖೆಯನ್ನು ಅಗಸ್ಟ್ 4 ರೊಳಗೆ ಮಗಿಸಿ ವರದಿ ಸಲ್ಲಿಸಲು ತನಿಖಾ ತಂಡಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಸೂಚಿಸಿದ್ದಾರೆ.

    ಜುಲೈ 29 ರಂದು ನೇತ್ರಾವತಿ ನದಿ ಸೇತುವೆ ಬಳಿ ನಿಗೂಢವಾಗಿ ಕಣ್ಮರೆಯಾಗಿ ನಂತರ 36 ಗಂಟೆಗಳ ಬಳಿಕ ನೇತ್ರಾವತಿ ಹಿನ್ನೀರಿನಲ್ಲಿ ಶವವಾಗಿ ಸಿದ್ದಾರ್ಥ ಪತ್ತೆಯಾಗಿದ್ದರು. ಪ್ರಕರಣದ ಕುರಿತಂತೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು, ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ಕೊಲೆ ಎಂದು ಚರ್ಚೆ ಕೂಡ ಪ್ರಾರಂಭವಾಗಿತ್ತು.

    ಈ ಹಿನ್ನಲೆಯಲ್ಲಿ ಕಾಫಿ ಕಿಂಗ್ ಸಿದ್ದಾರ್ಥ ಅವರ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ ಪ್ರಕರಣದ ತನಿಖೆಗಾಗಿ ನಾಲ್ಕು ತಂಡಗಳನ್ನು ರಚಿಸಿತ್ತು. ನಾಲ್ಕು ತಂಡಗಳ ಪೈಕಿ ಒಂದು ತಂಡ ಬೆಂಗಳೂರಿಗೆ ತೆರಳಿದ್ದು, ಸಿದ್ಧಾರ್ಥ ಕುಟುಂಬ, ಆಪ್ತರು, ಸ್ನೇಹಿತರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕುತ್ತಿದೆ. ಇನ್ನೊಂದು ತಂಡ ಮೊಬೈಲ್ ಕರೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ತಾಂತ್ರಿಕ ತನಿಖೆ ನಡೆಸುತ್ತಿದೆ.

    ಸಿದ್ಧಾರ್ಥ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಐಟಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಲಾಗಿದೆ. ಈ ಪತ್ರವನ್ನು ವಶಕ್ಕೆ ಪಡೆದಿರುವ ತನಿಖಾ ತಂಡ, ಪತ್ರದ ಅಸಲಿತನ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಇದುವರೆಗೆ ಐಟಿ ಅಧಿಕಾರಿಗಳಿಗೆ ತನಿಖಾ ನೋಟಿಸ್ ನೀಡಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

    ಸಿದ್ಧಾರ್ಥರ ಹಣಕಾಸು ಪ್ರಮುಖ ಸಲಹೆಗಾರರು ವಿದೇಶದಲ್ಲಿದ್ದು, ಇಮೇಲ್ ಮೂಲಕ ತಿಳಿಸಲಾಗಿದೆ. ಅವರು ಬಂದ ಬಳಿಕ ವಿಚಾರಣೆ ನಡೆಯಲಿದೆ. ಇಲ್ಲಿರುವ ಒಂದಿಬ್ಬರು ಹಣಕಾಸು ಸಲಹೆಗಾರರ ವಿಚಾರಣೆ ಪ್ರಕ್ರಿಯೆ ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

    ಮಂಗಳೂರಿನಲ್ಲಿ ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. 3 ದಿನಗಳಿಂದ ಸಿದ್ಧಾರ್ಥರ ಕಾರು ಚಾಲಕ ಬಸವರಾಜನನ್ನು ವಿಚಾರಣೆ ನಡೆಸಿ ಬಿಡಲಾಗಿದೆ. ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್​ಗೇಟ್​ನಿಂದ ಪಂಪ್​ವೆಲ್​ಗೆ ಬಂದ ಬಳಿಕ ಎಲ್ಲಿಗೆ ಹೋಗಿದ್ದರು ಹಾಗೂ ನೇತ್ರಾವತಿ ಸೇತುವೆಯಿಂದ ನಾಪತ್ತೆ ಯಾಗುವ ತನಕದ ಎಲ್ಲ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply