ನವದೆಹಲಿ/ಪುಣೆ, ಮಾರ್ಚ್ 12: ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ Hardik Pandya ವಿರುದ್ಧ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪುಣೆಯಲ್ಲಿ ಪೊಲೀಸರಿಗೆ ದೂರು ಸಲ್ಲಿಸಿರುವ ಘಟನೆ ಬೆಳಕಿಗೆ ಬಂದಿದೆ.

ವರದಿಗಳ ಪ್ರಕಾರ, ಇತ್ತೀಚೆಗೆ ನಡೆದ ಸಂಭ್ರಮದ ಸಂದರ್ಭದಲ್ಲಿ ಪಾಂಡ್ಯ ಅವರು ಭಾರತದ ತ್ರಿವರ್ಣ ಧ್ವಜವನ್ನು ಹೊದ್ದುಕೊಂಡೇ ಗೆಳತಿಯೊಂದಿಗೆ ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ರಾಷ್ಟ್ರಧ್ವಜವನ್ನು ಅಸಮರ್ಪಕವಾಗಿ ಬಳಸಲಾಗಿದೆ ಎಂದು ಕೆಲವರು ಆರೋಪಿಸಿದ್ದು, ಇದರಿಂದ ವಿವಾದ ಉಂಟಾಗಿದೆ.
ಈ ಹಿನ್ನೆಲೆ ಪುಣೆಯ ವಕೀಲರೊಬ್ಬರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ರಾಷ್ಟ್ರಧ್ವಜವನ್ನು ಈ ರೀತಿಯಾಗಿ ಬಳಸಿರುವುದು ರಾಷ್ಟ್ರೀಯ ಗೌರವಕ್ಕೆ ಅವಮಾನ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರುದಾರರ ಪ್ರಕಾರ, ಇದು Prevention of Insults to National Honour Act, 1971 ಕಾಯ್ದೆಯಡಿ ಅಪರಾಧವಾಗಬಹುದು ಎಂದು ಹೇಳಲಾಗಿದೆ. ವಿಡಿಯೋ ವೈರಲ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಪಾಂಡ್ಯ ಅವರ ನಡೆಗೆ ಟೀಕೆ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಇದು ಕೇವಲ ಸಂಭ್ರಮದ ಭಾಗವಾಗಿದ್ದು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.