ಬೆಳ್ತಂಗಡಿ, ಏಪ್ರಿಲ್ 01: ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸಿನಿಂದ ಬಿದ್ದ ಇಬ್ಬರು ವಿದ್ಯಾರ್ಥಿನಿಯರ ಘಟನೆಗೆ ಸಂಬಂಧಿಸಿ, ಬಸ್ಸಿನ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಸಮೀಪ ಮಾ.31ರಂದು ಬೆಳಿಗ್ಗೆ ಕಳಿಯದಿಂದ ಬೆಳ್ತಂಗಡಿ ಕಡೆಗೆ ಸಾಗುತ್ತಿದ್ದ ಬಸ್ಸಿನಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಬಸ್ಸಿನ ಬಾಗಿಲು ಸರಿಯಾಗಿ ಮುಚ್ಚದಿರುವ ಹಿನ್ನೆಲೆ, ಪ್ರಯಾಣ ಮಧ್ಯೆ ಬಾಗಿಲು ಆಕಸ್ಮಿಕವಾಗಿ ತೆರೆಯಿತು ಎಂದು ತಿಳಿದುಬಂದಿದೆ.
ಈ ಪರಿಣಾಮವಾಗಿ ಒಂದೇ ಮನೆಯ ಸಹೋದರಿಯರಾದ ಚರಿಷ್ಮಾ (17) ಮತ್ತು ಚಸ್ಮಿಕಾ (15) ಬಸ್ಸಿನಿಂದ ಕೆಳಗೆ ಎಸೆಯಲ್ಪಟ್ಟು ಗಾಯಗೊಂಡಿದ್ದರು. ಇಬ್ಬರೂ ವಿದ್ಯಾರ್ಥಿನಿಯರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿನಿ ಚರಿಷ್ಮಾ ನೀಡಿದ ದೂರಿನ ಮೇರೆಗೆ, ಬಸ್ಸಿನ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 125 ಹಾಗೂ 125(a) ಅಡಿಯಲ್ಲಿ ಮಾ.31ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.