ಬಂಟ್ವಾಳ ಜನವರಿ 08: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಅವಹೇಳನ ಮಾಡಿ ಪೋಸ್ಟ್ ಹಾಕಿದ್ದ ಬಿಲ್ಲವ ಸಂದೇಶ್ ಎಂಬ ಖಾತೆ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾವೂರು ಗ್ರಾಮ ನಿವಾಸಿ ಸದಾನಂದ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ಬುಧವಾರ ಬೆಳಗ್ಗೆ ಫೇಸ್ಬುಕ್ ನೋಡುತ್ತಿರುವಾಗ ಬಿಲ್ಲವ ಸಂದೇಶ್ ಎಂಬ ಹೆಸರಿನ ಖಾತೆಯಲ್ಲಿ ‘ದಲಿತ ಸಮುದಾಯದ ಶಾಸಕಿ ಭಾಗೀರಥಿ ಮುರುಳ್ಯ ಅವರು ಶೋಷಣೆಗೊಳಗಾದ ದಲಿತ ಸಮುದಾಯದ ಪರ ನಿಲ್ಲದೆ ಇಂದು ಎಲ್ಲರನ್ನೂ ಅಗಲಿ ತೆರಳಿದ್ದಾರೆ, ಇದರ ಅಗಲಿಕೆಯನ್ನು ಭರಿಸುವ ಶಕ್ತಿ ಬ್ಲೂಜೆಪಿ ಪಕ್ಷದ ಕಾರ್ಯಕರ್ತರಿಗೆ ದೇವರು ನೀಡಲಿ ಎಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ’ ಎಂದು ಬರೆದು ಶಾಸಕಿಯ ಭಾವಚಿತ್ರದ ಮೇಲೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Read This Also- ಸುಳ್ಯ ಬಿಜೆಪಿ ಶಾಸಕಿ ವಿರುದ್ದ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ವಿಚಾರ- ಆರೋಪಿ ವಿರುದ್ದ ಕ್ರಮಕ್ಕೆ ಬಿಜೆಪಿ ಮಹಿಳಾ ಮೋರ್ಚಾದಿಂದ ಎಸ್ಪಿ ಗೆ ದೂರು
ಆರೋಪಿಯು ಶಾಸಕರನ್ನು ಅವಹೇಳನ ಮಾಡಿರುವ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ಹಾಗೂ ದಲಿತ ಸಮುದಾಯಕ್ಕೆ ಸೇರಿರುವ ಶಾಸಕರ ಕುರಿತು ಸುಳ್ಳು ಮಾಹಿತಿ ಹರಡಿ ಅವರ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಜಾತಿನಿಂದನೆ ಕೂಡ ಮಾಡಿದ್ದಾನೆ ಎಂದು ತಿಳಿಸಲಾಗಿದೆ. ಈ ಕೃತ್ಯ ಎಸಗಿರುವುದು ನಾವೂರು ಗ್ರಾಮದ ಸುಲಾನ್ಕಟ್ಟೆ ನಿವಾಸಿ ಸಂದೇಶ್ ಯಾನೆ ಸೀತಾರಾಮ ಎನ್ನಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.