Connect with us

LATEST NEWS

ಕಮೀಷನರ್ ಅಗ್ರವಾಲ್ ಎತ್ತಂಗಡಿಯಾಗದೆ ವಿರಮಿಸುವುದಿಲ್ಲ, ಹೋರಾಟವನ್ನು ಜಿಲ್ಲೆಯ ಮೂಲೆಮೂಲೆಗೆ ವಿಸ್ತರಿಸುತ್ತೇವೆ : ಮುನೀರ್ ಕಾಟಿಪಳ್ಳ

ಮಂಗಳೂರು: ಪ್ರತಿಭಟನೆ, ಧರಣಿಗಳಿಗೆ ಅನುಮತಿ ನಿರಾಕರಿಸುತ್ತಿರುವ, ಜನಪರ ಸಂಘಟನೆಗಳ ಮೇಲೆ ಸರಣಿ ಮೊಕದ್ದಮೆ ಹೂಡುತ್ತಿರುವ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು, ಮಂಗಳೂರು ನಗರಿದಂದ ಅವರನ್ನು ವರ್ಗಾಯಿಸಬೇಕು ಒತ್ತಾಯಿಸಿ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ನಗರದ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನಾ ಸಭೆ ನಡೆಯಿತು.

ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಕಮೀಷನ್ ಹಠಾವೊ ಘೋಷಣೆಗಳನ್ನು ಕೂಗಿದರು. ಕಮೀಷನರ್ ವಿರುದ್ಧದ ಆರೋಪಗಳ ಕುರಿತು ಹಾಡು ಕಟ್ಟಿ ಹಾಡಿದರು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಪಿಐಂ ದ‌.ಕ‌. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, “ಎಫ್ಐಆರ್ ದಾಖಲಿಸಿರುವ ಕುರಿತು ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಕರಾವಳಿಯಲ್ಲಿ ಸ್ಚಾತಂತ್ರ್ಯಪೂರ್ವದಿಂದಲೇ ದುಡಿಯುವ ಜನರ, ಜನಸಾಮಾನ್ಯರ ಪರವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿರುವ ಕಮ್ಯುನಿಸ್ಟ್ ಪಕ್ಷಗಳಿಗೆ ಇದು ಹೊಸದೂ ಅಲ್ಲ. ಆದರೆ, ಜನಸಾಮಾನ್ಯರು ಹಕ್ಕಿಗಳಿಗಾಗಿ, ತಮಗಾಗುತ್ತಿರುವ ಅನ್ಯಾಯಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನೇ ನಿಷೇಧಿಸುವ ಕಮೀಷನರ್ ಅಗ್ರವಾಲ್ ನಡೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಜನಪರ ಸಂಘಟನೆಗಳನ್ನು ಶತ್ರುಗಳಂತೆ ಕಾಣುವ ಅಗ್ರವಾಲ್ ಅದೇ ಸಂದರ್ಭ ಮತೀಯ ಶಕ್ತಿಗಳನ್ನು, ಅಕ್ರಮ ಮರಳುಗಾರಿಕೆ, ಜುಗಾರಿ, ಬೆಟ್ಟಿಂಗ್, ಮಸಾಜ್ ಪಾರ್ಲರ್ ದಂಧೆಕೋರರನ್ನು ಬಂಧುಗಳಂತೆ ಕಾಣುತ್ತಿದ್ದಾರೆ. ಆ ಮೂಲಕ ಮಂಗಳೂರಿನಲ್ಲಿ ಪೊಲೀಸ್ ರಾಜ್ ನಿರ್ಮಿಸುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಬ್ರಿಟಿಷ್ ವಸಾಹತು ಕಾಲದ ಜನರಲ್ ಡಯರ್ ನಂತೆ ವರ್ತಿಸುವ ಅನುಪಮ್ ಅಗ್ರವಾಲ್ ರನ್ನು ರಾಜ್ಯ ಸರಕಾರ ತಕ್ಷಣವೇ ವರ್ಗಾಯಿಸಬೇಕು, ಇಲ್ಲದಿದ್ದಲ್ಲಿ ಹೋರಾಟ ಜಿಲ್ಲೆಯ ಮೂಲೆ ಮೂಲೆಗೆ ವಿಸ್ತರಣೆಗೊಳ್ಳಲಿದೆ. ಪೊಲೀಸ್ ಕಮೀಷನರ್ ಎತ್ತಂಗಡಿಯಾಗದೆ ವಿರಮಿಸುವುದಿಲ್ಲ ಎಂದು ಹೇಳಿದರು.

ಸಿಪಿಐಂ ರಾಜ್ಯ ಸಮಿತಿ ಸದಸ್ಯ ಕೆ. ಯಾದವ ಶೆಟ್ಟಿ ಮಾತನಾಡುತ್ತಾ, ಜನರ ಪರವಾಗಿ ನಡೆಸುವ ಹೋರಾಟಗಳನ್ನು ನಿಕೃಷ್ಟವಾಗಿ ಕಾಣುವುದು ಪೊಲೀಸ್ ಅಧಿಕಾರಿಗಳಿಗೆ ಶೋಭೆ ತರುವುದಿಲ್ಲ. ಜಿಲ್ಲೆಯಲ್ಲಿ ಸಿಪಿಐಎಂ ಪಕ್ಷ ಅಗಣಿತವಾದ ಹೋರಾಟಗಳನ್ನು ನಡೆಸಿದೆ. ನಮ್ಮ ಎಲ್ಲಾ ಬೇಡಿಕೆಗಳು ನ್ಯಾಯ ಸಮ್ಮತವಾಗಿರುತ್ತದೆ. ಪ್ರತಿಭಟನೆಗಳಿಗೆ ನಿಯಮ ಬದ್ಧವಾಗಿ ಅನುಮತಿ ಕೋರಿದರೂ ನಿರಾಕರಿಸುವುದು, ಕಾರಣ ಕೇಳಲು ಫೋನ್ ಮೂಲಕ ಸಂಪರ್ಕಿಸಲು ಸತತವಾಗಿ ಕರೆ ಮಾಡಿದರೂ ಸ್ವೀಕರಿಸದಿರುವುದು ನಡೆದಿದೆ‌. ಅಗ್ರವಾಲ್ ನಡೆ ಪೊಲೀಸ್ ಇಲಾಖೆಗೆ ಕಳಂಕ ತರುವಂತಿದೆ. ರಾಜ್ಯ ಸರಕಾರ ತಕ್ಷಣವೇ ಅವರನ್ನು ಜಿಲ್ಲೆಯಿಂದ ವರ್ಗಾಯಿಸಬೇಕು. ಇಂತಹ ಬಿಜೆಪಿ ಪರ ಅಧಿಕಾರಿಗಳಿಂದ ಸರಕಾರಕ್ಕೂ ಕೆಟ್ಟ ಹೆಸರು ಎಂದರು.ಇನ್ನೋರ್ವ ರಾಜ್ಯ ಸಮಿತಿ ಸದಸ್ಯ ವಸಂತ ಆಚಾರಿ ಮಾತನಾಡುತ್ತಾ, ಜಿಲ್ಲೆಯಲ್ಲಿ ಗೇಣಿದಾರ ರೈತರ, ಹೆಂಚು, ಬೀಡಿ ಕಾರ್ಮಿಕರ ಪರ ನಡೆದಿರುವ ಹೋರಾಟದ ಇತಿಹಾಸವನ್ನು ಪೊಲೀಸ್ ಕಮೀಷನರ್ ತಿಳಿದುಕೊಳ್ಳಬೇಕು. ತೀರಾ ಇತ್ತೀಚೆಗೆ ಟೋಲ್ ಗೇಟ್ ತೆರವು ಯಶಸ್ವಿ ಹೋರಾಟದ ಕುರಿತೂ ಕಮೀಷನರ್ ಅರಿತುಕೊಳ್ಳಬೇಕು‌. ನಮ್ಮದು ವಂಚಿತರ ಪರವಾದ ಹೋರಾಟ. ಅದನ್ನು ಹತ್ತಿಕ್ಕಲು ಹೊರಟರೆ ಸರಿಯಾದ ಉತ್ತರವನ್ನೇ ನೀಡುತ್ತೇವೆ. ಕಮೀಷನರ್ ಅಗ್ರವಾಲ್ ರನ್ನು ರಾಜ್ಯ ಸರಕಾರ ವರ್ಗಾಯಿಸಿದರೆ ಸಾಲದು, ಅವರನ್ನು ರಾಜ್ಯ ಸರಕಾರ ಅಮನತು ಮಾಡಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾದ ಕಾಮ್ರೇಡ್ ಸುಕುಮಾರ್ ತೊಕ್ಕೊಟ್ಟು, ಬಿ ಎಂ ಭಟ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು‌. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾದ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ದಾಸ್ ವಂದಿಸಿದರು‌.

ಪ್ರತಿಭಟನೆ ಯ ನೇತ್ರತ್ವವನ್ನು ಸಿಪಿಐಎಂ ಜಿಲ್ಲಾ ಸಮಿತಿ ಮುಖಂಡರಾದ ಜಯಂತಿ ಬಿ ಶೆಟ್ಟಿ, ಜೆ ಬಾಲಕೃಷ್ಣ ಶೆಟ್ಟಿ, ರಮಣಿ ಮೂಡಬಿದ್ರೆ, ರಾಧಾ ಪುತ್ತಿಗೆ, ವಸಂತಿ ಕುಪ್ಪೆಪದವು, ಯೋಗೀಶ್ ಜಪ್ಪಿನಮೊಗರು, ಜಯಂತ ನಾಯ್ಕ್, ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ರಫೀಕ್ ಹರೇಕಳ, ಪ್ರಮೀಳಾ ಶಕ್ತಿನಗರ, ಶೇಖರ್ ಕುತ್ತಾರ್,ಈಶ್ವರಿ ಬೆಳ್ತಂಗಡಿ ಮುಂತಾದವರು ವಹಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *