LATEST NEWS
ಕಾಲೇಜು ವಿಧ್ಯಾರ್ಥಿನಿ ಪ್ರೇಕ್ಷಾ ಆತ್ಮಹತ್ಯೆ ಪ್ರಕರಣ – 20 ಮಂದಿ ಪೊಲೀಸ್ ವಶಕ್ಕೆ
ಮಂಗಳೂರು ಮಾರ್ಚ್ 13: ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನಪ್ಪಿದ ಕಾಲೇಜು ವಿಧ್ಯಾರ್ಥಿನಿ ಪ್ರೇಕ್ಷಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಮಂದಿ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕುಂಪಲ ಆಶ್ರಯ ಕಾಲೊನಿ ಮನೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡುಬಂದ ರೂಪದರ್ಶಿ, ಕಾಲೇಜು ವಿದ್ಯಾರ್ಥಿನಿ ಪ್ರೇಕ್ಷಾ ಸಾವಿನ ಕುರಿತಂತೆ ಹಲವು ಉಹಾಪೋಹಗಳು ಜನರಲ್ಲಿ ಮೂಡಿದ್ದು, ಈ ಹಿನ್ನಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಮಂಗಳೂರು ಪೊಲೀಸರು ಶುಕ್ರವಾರ ಮತ್ತೆ 20 ಮಂದಿ ಯುವಕರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರಿಗೆ ಸ್ಥಳೀಯರು ನೀಡಿದ ಮಾಹಿತಿಯನ್ವಯ ಗುರುವಾರ ಮೂರು ಮಂದಿ ಯುವಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಮತ್ತಷ್ಟು ಮಾಹಿತಿ ಲಭಿಸಿದ್ದು, ಅದರನ್ವಯ ಶುಕ್ರವಾರ ಬೆಳ್ಳಂಬೆಳಗ್ಗೆ ಮತ್ತಷ್ಟು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇತ್ತ ಪ್ರೇಕ್ಷ ಅನುಮಾನಾಸ್ಪದ ಸಾವು ಪ್ರಕರಣದ ಸಮಗ್ರ ತನಿಗೆ ಒತ್ತಾಯಿಸಿ ಹಾಗೂ ಅವ್ಯಾಹತ ಗಾಂಜಾ ಜಾಲಕ್ಕೆ ಕಡಿವಾಣ ಹಾಕಲು ಆಗ್ರಹಿಸಿ ಮಂಗಳೂರು ಪೊಲೀಸ್ ಆಯುಕ್ತರಿಗೆ ವಿಶ್ವ ಹಿಂದು ಪರಿಷತ್ ದುರ್ಗಾವಾಹಿನಿ ಮನವಿ ಸಲ್ಲಿಸಿದೆ. ಈ ನಿಗೂಢ ಸಾವಿನ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಬೇಕೆಂದು ವಿಹಿಂಪ ದುರ್ಗಾವಾಹಿನಿ ಆಗ್ರಹಿಸಿದೆ.