ಕೊಯಮತ್ತೂರು ಜೂನ್ 18: ಕೇಂದ್ರ ಸರ್ಕಾರದ ನೀಟ್ (NEET) ಪರೀಕ್ಷೆಯ ಗೊಂದಲ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಗಳು ಮತ್ತೊಂದು ಮುಗ್ಧ ಜೀವವನ್ನು ಬಲಿಪಡೆದಿವೆ. ಜೂನ್ 21 ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ಅನು ಕೀರ್ತನಾ ಅವರು ತೀವ್ರ ಮಾನಸಿಕ ಒತ್ತಡ ತಾಳಲಾರದೆ ಬುಧವಾರ ಕೊಯಮತ್ತೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವಿದ್ಯಾರ್ಥಿನಿ ಸಿಐಟಿಯು (CITU) ಟ್ಯಾಸ್ಮ್ಯಾಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಸಿಪಿಐ(ಎಂ) ಮುಖಂಡ ಸೆಂಥಿಲ್ ಪ್ರಭು ಅವರ ಪುತ್ರಿಯಾಗಿದ್ದಾರೆ.

ಈ ಹಿಂದೆ ಒಮ್ಮೆ ನೀಟ್ ಬರೆದು ಬಿಡಿಎಸ್ (BDS) ಕೋರ್ಸ್ಗೆ ಸೀಟು ಪಡೆದಿದ್ದರೂ, ಎಂಬಿಬಿಎಸ್ ಆಕಾಂಕ್ಷಿಯಾಗಿದ್ದ ಅನು ಕೀರ್ತನಾ ಮತ್ತೆ ನೀಟ್ ಪರೀಕ್ಷೆ ಬರೆದಿದ್ದರು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಿಂದಾಗಿ ಆ ಪರೀಕ್ಷೆ ರದ್ದಾಗಿ, ಎನ್ಟಿಎ (NTA) ಜೂನ್ 21ಕ್ಕೆ ಮರು ಪರೀಕ್ಷೆ ಘೋಷಿಸಿತ್ತು. ಇದರಿಂದ ಕಂಗಾಲಾಗಿದ್ದ ಅನು, ಬುಧವಾರ ಬೆಳಗಿನ ಜಾವ 2:00 ಗಂಟೆ ಸುಮಾರಿಗೆ ತನ್ನ ಚಿಕ್ಕಪ್ಪನಿಗೆ ವಾಟ್ಸಾಪ್ ಸಂದೇಶ ಕಳುಹಿಸಿ, “ನನಗೆ ನಿರೀಕ್ಷಿತ ಮಟ್ಟದಲ್ಲಿ ತಯಾರಿ ನಡೆಸಲು ಸಾಧ್ಯವಾಗುತ್ತಿಲ್ಲ, ತೀವ್ರ ಮಾನಸಿಕ ಒತ್ತಡದಲ್ಲಿದ್ದೇನೆ” ಎಂದು ಕಣ್ಣೀರಿಟ್ಟಿದ್ದರು.
ಸಂದೇಶ ನೋಡಿ ಗಾಬರಿಗೊಂಡ ಚಿಕ್ಕಪ್ಪ ತಕ್ಷಣ ಮನೆಗೆ ಧಾವಿಸಿ, ಅನು ಕೀರ್ತನಾಳನ್ನು ರಕ್ಷಿಸಿ ಕೊಯಮತ್ತೂರಿನ ಗಣಪತಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ. ಕುಣಿಯಮುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಖಂಡಿಸಿ ಇಎಸ್ಐ (ESI) ಆಸ್ಪತ್ರೆಯ ಮುಂದೆ ಟ್ಯಾಸ್ಮ್ಯಾಕ್ ನೌಕರರು ಹಾಗೂ ಸಿಪಿಐ(ಎಂ) ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದರು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸಿ. ಪದ್ಮನಾಭನ್ ಮಾತನಾಡಿ, “ದೇಶದ 21 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯ ಅಕ್ರಮಗಳಿಂದಾಗಿ ತೀವ್ರ ಮಾನಸಿಕ ಯಾತನೆ ಅನುಭವಿಸುತ್ತಿದ್ದಾರೆ. ಇದು ₹60,000 ಕೋಟಿ ವಹಿವಾಟಿನ ಖಾಸಗಿ ಸಂಸ್ಥೆಗಳ ಲಾಭದ ದೆಸೆಯಾಗಿದೆ. ಇನ್ನಾದರೂ ಜೀವಹಾನಿ ತಡೆಯಲು ಕೇಂದ್ರ ನೀಟ್ ರದ್ದು ಮಾಡಲಿ” ಎಂದು ಆಗ್ರಹಿಸಿದರು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಅವರು, “ತಮಿಳುನಾಡಿನ ಮೇಲೆ ನೀಟ್ ಹೇರಿ, ಅಕ್ರಮ ತಡೆಯಲು ವಿಫಲವಾಗಿರುವ ಕೇಂದ್ರ ಸರ್ಕಾರಕ್ಕೆ ಇನ್ನು ಎಷ್ಟು ಜೀವಗಳು ಬೇಕು?” ಎಂದು ಎಕ್ಸ್ (X) ಖಾತೆಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.