LATEST NEWS
ಕೆನರಾ ಬ್ಯಾಂಕ್ ವಿರುದ್ದ ಮಂಗಳೂರಿನಲ್ಲಿ ಕಾಫಿ ಬೆಳೆಗಾರರ ಪ್ರತಿಭಟನೆ
ಮಂಗಳೂರು ಅಕ್ಟೋಬರ್ 10:ಸರ್ಫೇಸಿ ಕಾಯ್ದೆ ನೆಪದಲ್ಲಿ ಕಾಫಿ ಬೆಳೆಗಾರರ ಆಸ್ತಿ ಹರಾಜು ಹಾಕುತ್ತಿರುವ ಕೆನರಾ ಬ್ಯಾಂಕ್ ವಿರುದ್ದ ಕರ್ನಾಟಕ ಬೆಳಗಾರರ ಒಕ್ಕೂಟದ ನೇತೃತ್ವದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ.
ನಗರದ ಕ್ಲಾಕ್ ಟವರ್ ಎದುರು ನಡೆದ ಪ್ರತಿಭಟನೆಯಲ್ಲಿ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರು ಭಾಗವಹಿಸಿದ್ದರು. ಕಾಫಿ ಕೃಷಿಯನ್ನು ಸರ್ಫೇಸಿ ಕಾಯ್ದೆಯಡಿ ತಂದು ಬೆಳೆಗಾರರಿಗೆ ಕಿರುಕುಳ ನೀಡುತ್ತಿರುವ ಕೆನರಾ ಬ್ಯಾಂಕ್‌ನ ರೈತ/ ಬೆಳೆಗಾರರ ವಿರೋದಿ ಮನಸ್ಥಿತಿಯ ಕೆಲವು ಉನ್ನತ ಅದಿಕಾರಿಗಳ ಸರ್ವಾಕಾರಿ ಧೋರಣೆ ವಿರುದ್ಧ ಘೋಷಣೆ ಕೂಗಿದರು.
ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಕೆ.ಡಿ.ಮನೋಹರ್, ಮುಖಂಡರಾದ ದೀಪಕ್ ದೊಡ್ಡಯ್ಯ, ನಿಡುವಾಳೆ ಚಂದ್ರು, ಹದ್ದೂರಿ ಕುಮಾರ್, ಲೋಹಿತ್, ಕೃಷ್ಣ ಕೆಜಿಎಫ್, ಮಲ್ಲೇಶ್, ಬಿ.ಸಿ.ದಯಕರ್, ಮತ್ತಿತರರು ಮಾತನಾಡಿದರು. ಈಗಾಗಲೇ ಹಲವಾರು ಸಮಸ್ಯೆಗಳಲ್ಲಿ ಸಿಲುಕಿರುವ ಕಾಫಿ ಬೆಳೆಗಾರರಿಗೆ ಈಗ ಸಾಲ ಹಾಗೂ ಸುಸ್ತಿ ಸಾಲದ ಸಮಸ್ಯೆ ಬಹಳ ತೀವ್ರವಾಗಿ ಕಾಡುತ್ತಿದೆ, ಸರ್ಫಾಸಿ ಕಾಯಿದೆ ನೆಪದಲ್ಲಿ ಬೆಳೆಗಾರರ ಆಸ್ತಿ ಹರಾಜು ಹಾಕುತ್ತಿರುವ ಬ್ಯಾಂಕ್‌ಗಳ ನೀತಿ ವಿರುದ್ಧ ಹೋರಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಬೆಳೆಗಾರರ ಸಮಸ್ಯೆಗಳನ್ನು ಕುರಿತು ತಿಳಿದಿರುವ ಬಹುತೇಕ ಎಲ್ಲ ಬ್ಯಾಂಕ್‌ಗಳು ಬೆಳೆಗಾರರ ಹಿತರಕ್ಷಣೆ ದೃಷ್ಟಿಯಿಂದ ಸಾಲ ಮರುಪಾವತಿಗೆ ಸಮಯಾವಾಂಶ ನೀಡಲು ಒಪ್ಪಿ ಬೆಳೆಗಾರರ ಸಹಾಯಕ್ಕೆ ನಿಂತಿವೆ. ಆದರೆ ಕೆನರಾ ಬ್ಯಾಂಕ್ ಮಾತ್ರ ಅತ್ಯಂತ ಅಮಾನವೀಯವಾಗಿ ಬೆಳೆಗಾರರ ವಿರುದ್ಧ ವಸೂಲಾತಿ, ಹರಾಜು ಕ್ರಮ ಜರುಗಿಸುತ್ತಿದೆ.
ಬೆಳೆಗಾರರ ತೋಟಗಳನ್ನು ಕೆಲವೇ ತಿಂಗಳ ನೋಟಿಸ್ ನೀಡಿ ಆನ್‌ಲೈನ್‌ನಲ್ಲಿ ಹರಾಜು ಮಾಡುತ್ತಿದೆ, ಈ ಕುರಿತು ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾಕಾರಿ ಉಪಸ್ಥಿತಿಯಲ್ಲಿ ಜಿಲ್ಲಾ ಲೀಡ್ ಬ್ಯಾಕ್ ಮುಖ್ಯಸ್ಥರ ಮೂಲಕ ಮನವಿ ಸಲ್ಲಿಸಿದ್ದರೂ ಕೂಡ ಕೆನರಾ ಬ್ಯಾಂಕ್ ಅಧಿಕಾರಿ ವರ್ಗ ಅತ್ಯಂತ ಉದ್ಧಟತನದಿಂದ ಬೆಳೆಗಾರರ ವಿರುದ್ಧ ಕ್ರಮ ಜರುಗಿಸುತ್ತಲೇ ಬಂದಿದೆ ಎಂದು ಅವರು ಆರೋಪಿಸಿದರು.
ಈ ವೇಳೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ರೈತರು ದೇಶದ ಬೆನ್ನುಲುಬಾಗಿದ್ದಾರೆ. ಕಾಫಿ ಬೆಳೆಗಾರರೆಂದರೆ ದೊಡ್ಡ ಶ್ರೀಮಂತರೆಂಬ ಭಾವನೆ. ಅಲ್ಲೂ ಸಣ್ಣ ರೈತರು, ಸಂಕಷ್ಟವಿದೆ. ಈಗಿನ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಗಮನ ಸೆಳೆಯುವುದಾಗಿ ಹೇಳಿದರು.
You must be logged in to post a comment Login