ಸ್ವಚ್ಛ ಉಡುಪಿ-ಪ್ಲಾಸ್ಟಿಕ್ ಮುಕ್ತ ಉಡುಪಿ – ಶಾಸಕ ರಘುಪತಿ ಭಟ್

ಉಡುಪಿ ಅಕ್ಟೋಬರ್ 2 : ಮಾನಸಿಕ , ದೈಹಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಪರಿಸರ ಸ್ವಚ್ಚತೆಯೇ ಕಾರಣ ಎಂಬ ಭಾವನೆ ಹೊಂದಿದ್ದ, ಮಹಾತ್ಮಾ ಗಾಂಧೀಜಿಯವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಅದರಂತೆ ಉಡುಪಿ ಜಿಲ್ಲೆಯನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ, ಸ್ವಚ್ಛ ಉಡುಪಿ – ಪ್ಲಾಸ್ಟಿಕ್ ಮುಕ್ತ ಉಡುಪಿ ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡುವ ಮೂಲಕ, ಗಾಂಧೀಜಿ ಅವರ 150 ನೆ ಜನ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿ ಅವರ ಜನ್ಮ ದಿನಾಚರಣೆಯ ಅಂಗವಾಗಿ 5 ವರ್ಷಗಳ ಹಿಂದೆಯೇ ಸ್ವಚ್ಛ ಭಾರತ ಆಂದೋಲನ ರೂಪುಗೊಂಡಿದ್ದು, ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಇರುತ್ತದೆ ಎಂಬ ಗಾಂಧೀಜಿ ಅವರ ಆಶಯದಂತೆ , ನಾಗರೀಕರು ಸ್ವಚ್ಛತೆಯ ಬಗ್ಗೆ ಜಾಗೃತರಾಗಬೇಕು , ಪ್ಲಾಸ್ಟಿಕ್ ಬಳಕೆಯನ್ನು ಬಿಟ್ಟು ಬಟ್ಟಯ ಚಲಗಳನ್ನು ಬಳಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಉಡುಪಿ ಉಡುಪಿ ನಿರ್ಮಾಣಕ್ಕೆ ಸಹಕರಿಸಬೇಕು, ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಅರಿಯಬೇಕಿದ್ದರೆ ಕರ್ವಾಲಿ ನಲ್ಲಿ ನಿರ್ಮಾಣಗೊಂಡಿರುವ ತ್ಯಾಜ್ಯ ವಿಲೇವಾರಿ ಘಠಕ್ಕೆ ಭೇಟಿ ನೀಡಿದರೆ ಸಮಸ್ಯೆಯ ಗಂಭೀರತೆ ಅರಿವಾಗುತ್ತದೆ ಎಂದು ರಘುಪತಿ ಭಟ್ ಹೇಳಿದರು.

ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ ಪಾಪು ಬಾಪು ಕಿರುಪುಸ್ತಕವನ್ನು ಶಾಸಕ ರಘುಪತಿ ಭಟ್ ಬಿಡುಗಡೆಗೊಳಿಸಿದರು.

Facebook Comments

comments